
ಗಯಾನ: ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರತ ತಂಡ ಗೆಲ್ಲಲು 172 ರನ್ ಗಳ ಸವಾಲಿನ ಗುರಿ ನೀಡಿದೆ.
ಇಂದು ಗಯಾನದ ಪ್ರಾವಿಡೆಂಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ಇಂಗ್ಲೆಂಡ್ ಗೆ ಗೆಲ್ಲಲು 172 ರನ್ ಗುರಿ ನೀಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಈ ಹಿಂದಿನ ಪಂದ್ಯಗಳಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಕೊಹ್ಲಿ 9 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿ ಮತ್ತೆ ನಿರಾಶೆ ಮೂಡಿಸಿದರು.
ಮತ್ತೊಂದು ಬದಿಯಲ್ಲಿ ಎಂದಿನಂತೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಮುಂದವರೆಸಿದ ರೋಹಿತ್ ಶರ್ಮಾ ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ರನ್ ಹೆಕ್ಕುತ್ತಾ ಸಾಗಿದರು.
ಕೊಹ್ಲಿ ಬೆನ್ನಲ್ಲೇ ಪಂತ್ ಕೂಡ ಕೇವಲ 4 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 57 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಗಳಿಸಿ ಕೇವಲ 3ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಹಾರ್ದಿಕ್ ಪಾಂಡ್ಯಾ 23 ರನ್ ಗಳಿಸಿ ಔಟಾದರೆ, ಶಿವಂದುಬೆ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. ರವೀಂದ್ರ ಜಡೇಜಾ 17 ರನ್ ಗಳಿಸಿ ತಂಡದ ಮೊತ್ತ 170ರ ಗಡಿ ದಾಟಲು ನೆರವಾದರು.
ಅಂತಿಮವಾಗಿ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಇಂಗ್ಲೆಂಡ್ ಗೆ ಗೆಲ್ಲಲು 172 ರನ್ ಗಳ ಗುರಿ ನೀಡಿತು.
ಇಂಗ್ಲೆಂಡ್ ಪರ ಕ್ರೀಸ್ ಜೋರ್ಡನ್ 3 ವಿಕೆಟ್ ಪಡೆದರೆ, ಅದಿಲ್ ರಷೀದ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್ ಮತ್ತು ಟಾಪ್ಲೆ ತಲಾ 1 ವಿಕೆಟ್ ಪಡೆದರು.
Advertisement