
ಬಾರ್ಬಡೋಸ್: ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಇದೇ ಪಂದ್ಯದ ಮೂಲದ 3 ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬಾರ್ಬಡೋಸ್ ಮೈದಾನದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ, ವಿಶ್ವಕಪ್ ಟ್ರೋಫಿ ಗೆದ್ದ ನಂತರ ಟಿ20ಐಗೆ ನಿವೃತ್ತಿ ಘೋಷಣೆ ಮಾಡಿದ್ದು, ಇತಿಹಾಸದ ಪುಸ್ತಕದಲ್ಲಿ ಅಸಾಧಾರಣ ಸಾಧನೆಯೊಂದಿಗೆ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.
50 ಪಂದ್ಯ ಗೆದ್ದ ಮೊದಲ ನಾಯಕ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಗೆಲುವಿನ ಮೂಲಕ ರೋಹಿತ್ ಶರ್ಮಾ ಭಾರತದ ಪರ 50ನೇ ಟಿ20ಐ ಪಂದ್ಯ ಗೆದ್ದ ಸಾಧನೆ ಮಾಡಿದರು. ಆ ಮೂಲಕ ತಂಡವೊಂದರ ಪರ 50 ಪಂದ್ಯ ಗೆದ್ದ ಜಗತ್ತಿನ ಮೊದಲ ನಾಯಕ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾದರು.
2021ರಲ್ಲಿ ಟೀಂ ಇಂಡಿಯಾದ ಟಿ20 ತಂಡದ ನಾಯಕರಾಗಿ ನೇಮಕಗೊಂಡ ರೋಹಿತ್ ಶರ್ಮಾ ಅಂದಿನಿಂದ 61 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಬರೊಬ್ಬರಿ 50 ಪಂದ್ಯಗಳಲ್ಲಿ ಭಾರತ ಜಯಕಂಡಿದೆ. ಅವರ ನಾಯಕತ್ವದ ಗೆಲುವಿನ ಸರಾಸರಿ ಶೇ.78ರಷ್ಟಿದ್ದು, ಇದು ಜಗತ್ತಿನ ಯಾವುದೇ ತಂಡದ ನಾಯಕನ ಗೆಲುವಿನ ಸರಾಸರಿಗಿಂತ ಹೆಚ್ಚಾಗಿದೆ.
Most wins as captain in T20Is
50 - Rohit Sharma (IND)
48 - Babar Azam (PAK)
45 - Brian Masaba (UGA)
44 - Eoin Morgan (ENG)
ಎರಡು ಬಾರಿ T20 ವಿಶ್ವಕಪ್ ಗೆದ್ದ ಮೊದಲ ಆಟಗಾರ
ಇನ್ನು ಭಾರತ ತಂಡಕ್ಕೆ ಇದು 2ನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿದ್ದು, ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2007ರಲ್ಲಿ ಭಾರತ ತಂಡ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. ಆಗಲೂ ರೋಹಿತ್ ಶರ್ಮಾ ಟೀಂ ಇಂಡಿಯಾದ ಭಾಗವಾಗಿದ್ದರು. 2007 ರಲ್ಲಿ, ರೋಹಿತ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 16 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ಟಿ20 ವಿಶ್ವಕಪ್ ನಲ್ಲಿ ಶೇ.100 ರಷ್ಟು ಗೆಲುವಿನ ಶ್ರೇಯ
ಇನ್ನು ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶೇ.100ರಷ್ಟು ಗೆಲುವು ಹೊಂದಿದ ಜಗತ್ತಿನ ಮೊದಲ ನಾಯಕ ಎಂಬ ಕೀರ್ತಿಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಆ ಮೂಲಕ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಹೇಳಲಾಗುವ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅವರಿಂದಲೂ ಸಾಧ್ಯವಾಗದ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಈ ಹಿಂದೆ 2007 ರಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಾಗ, ಗ್ರೂಪ್ ಸ್ಟೇಜ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 10 ರನ್ ಸೋತಿತ್ತು. ಆದಾಗ್ಯೂ ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ರೋಹಿತ್ ಶರ್ಮಾ ಯಾವುದೇ ಪಂದ್ಯದ ವಿರುದ್ಧವೂ ಸೋಲದೇ ಅಜೇಯರಾಗಿ ಪ್ರಶಸ್ತಿಗೆ ಗೆದ್ದಿದ್ದಾರೆ.
Advertisement