IPL 2024, RCB vs KKR: ವಿರಾಟ್ ಕೊಹ್ಲಿ vs ಗೌತಮ್ ಗಂಭೀರ್; ಆರ್‌ಸಿಬಿ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದೇನು?
ಮಾರ್ಚ್ 29 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸೆಣಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಆವೃತ್ತಿಯಲ್ಲಿ ಆರ್‌ಸಿಬಿಗೆ ಇದು ಮೂರನೇ ಪಂದ್ಯವಾಗಿದ್ದು, ಕೆಕೆಆರ್‌ಗೆ ಎರಡನೇ ಪಂದ್ಯವಾಗಿದೆ. ಐಪಿಎಲ್ 2024 ಆವೃತ್ತಿಯಲ್ಲಿ ನಡೆದ ಇದುವರೆಗೂ ಆಡಿರುವ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಆತಿಥೇಯ ತಂಡಗಳೇ ಗೆಲುವು ಸಾಧಿಸಿವೆ.
ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯ ಹಲವು ವಿಚಾರಗಳಿಗೆ ಸದ್ದು ಮಾಡುತ್ತಿದೆ. ಒಂದೆಡೆ ಕೆಕೆಆರ್‌ನ ಸುನೀಲ್ ನರೇನ್, ಆಂಡ್ರೆ ರಸೆಲ್ ಮೇಲೆ ಅಭಿಮಾನಿಗಳ ಕಣ್ಣಿದ್ದು, ಮತ್ತೊಂದೆಡೆ ಆರ್‌ಸಿಬಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಆಟದ ಮೇಲೆ ಭರವಸೆ ವ್ಯಕ್ತವಾಗಿದೆ. ಇದೀಗ, ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಈ ಪಂದ್ಯ ಯಾರ ನಡುವಿನ ಪಂದ್ಯ ಎಂಬುದನ್ನು ಹೇಳಿದ್ದಾರೆ.
ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಗೌತಮ್ ಗಂಭೀರ್ vs ವಿರಾಟ್ ಕೊಹ್ಲಿ ನಡುವಿನ ಪಂದ್ಯವಾಗಿ ಮಾರ್ಪಡಲಿದೆ ಎಂದು ದಿನೇಶ್ ಕಾರ್ತಿಕ್ ಲೇವಡಿ ಮಾಡಿದ್ದಾರೆ.
'ವಿರಾಟ್ ಕೊಹ್ಲಿ ವಿರುದ್ಧ ಗೌತಮ್ ಗಂಭೀರ್, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯದಲ್ಲಿ ತುಂಬಾ ಆಸಕ್ತಿದಾಯಕವಾಗಿ ಕಾಣುತ್ತಾರೆ. ನನಗೆ (ದಿನೇಶ್ ಕಾರ್ತಿಕ್) ವರುಣ್ ಚಕ್ರವರ್ತಿ ತುಂಬಾ ಆಸಕ್ತಿದಾಯಕವಾಗಿರುತ್ತಾರೆ' ಎಂದು ದಿನೇಶ್ ಕಾರ್ತಿಕ್ ಶುಕ್ರವಾರ ನಡೆಯಲಿರುವ ಆರ್‌ಸಿಬಿ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.
ಗಂಭೀರ್ vs ಕೊಹ್ಲಿ ನಡುವೆ ಬಿರುಕು
ಐಪಿಎಲ್ 2023 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಲೀಗ್ ಹಂತದ ಪಂದ್ಯದ ವೇಳೆ ಗಂಭೀರ್ ಮತ್ತು ಕೊಹ್ಲಿ ನಡುವೆ ಕಲಹ ಉಂಟಾಗಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಂಭೀರ್ ಮತ್ತು ಕೊಹ್ಲಿ ಮುಖಾಮುಖಿಯಾಗಿದ್ದರು. ಈ ವೇಳೆ ಎಲ್‌ಎಸ್‌ಜಿ ಪಂದ್ಯ ಗೆದ್ದಿತ್ತು. ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದ ಗಂಭೀರ್ ಮತ್ತು ಕೊಹ್ಲಿಯನ್ನು ಸಮಾಧಾನಪಡಿಸಲು ಅಮಿತ್ ಮಿಶ್ರಾ ಸೇರಿದಂತೆ ಇತರ ಆಟಗಾರರು ಮಧ್ಯಪ್ರವೇಶಿಸಿದ್ದರು. ಈ ಬಾರಿ ಗೌತಮ್ ಗಂಭೀರ್ ಅವರು ಕೆಕೆಆರ್ ತಂಡದ ಮೆಂಟರ್ ಆಗಿದ್ದಾರೆ.
ಆರ್‌ಸಿಬಿ vs ಕೆಕೆಆರ್ ರೋಚಕ ಪಂದ್ಯ
ಕೋಲ್ಕತ್ತಾ ಮತ್ತು ಬೆಂಗಳೂರು ತಂಡಗಳು ಈವರೆಗೆ 32 ಪಂದ್ಯಗಳನ್ನು ಆಡಿದ್ದು, ಕೆಕೆಆರ್ 18 ಪಂದ್ಯಗಳಲ್ಲಿ ಮತ್ತು ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮುಖ್ಯವಾಗಿ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವಾಗಲೆಲ್ಲಾ ಕೆಕೆಆರ್ ತಂಡ ಆರ್‌ಸಿಬಿಗಿಂತ ಉತ್ತಮ ಪ್ರದರ್ಶನ ನೀಡಿದೆ. ಉಭಯ ತಂಡಗಳು ಬೆಂಗಳೂರಿನಲ್ಲಿ ಆಡಿರುವ ಒಟ್ಟು 11 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ