
ನವದೆಹಲಿ: ಸಾರ್ವಜನಿಕವಾಗಿ, ಟಿ.ವಿ. ಕ್ಯಾಮರಾಗಳ ಮುಂದೆಯೇ ಕನ್ನಡಿಗ, ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ವಿರುದ್ಧ ರೇಗಾಡಿದ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ ಗೋಯಂಕ ಅವರ ವರ್ತನೆಯನ್ನು ವೇಗಿ ಮೊಹಮ್ಮದ್ ಖಂಡಿಸಿದ್ದಾರೆ.
ಗೋಯಂಕ ಅವರ ವರ್ತನೆ ನಾಚಿಕೆಗೇಡಿನದ್ದು, ಕ್ರೀಡೆಯಲ್ಲಿ ಇಂಥದ್ದಕ್ಕೆ ಸ್ಥಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ಲಖನೌ ತಂಡ 10 ವಿಕೆಟ್ ಗಳ ಅಂತರದಿಂದ ಸೋತ ನಂತರ ಆರ್ ಪಿಜಿ ಸಮೂಹದ ಮುಖ್ಯಸ್ಥ ಸಂಜೀವ್ ಗೋಯಂಕಾ ಅವರ ತಂಡದ ನಾಯಕ ರಾಹುಲ್ ವಿರುದ್ಧ ರೇಗಾಡಿರುವ ಹಾಗೂ ರಾಹುಲ್ ತಾಳ್ಮೆಯಿಂದ ಇರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಾಲ್ಕು ಗೋಡೆಗಳ ಮಾತನಾಡಿ ತಂಡದ ಸಮಸ್ಯೆಯನ್ನು ಚರ್ಚಿಸಬೇಕಾಗಿದ್ದ ಗೋಯಂಕಾ ಅವರು ಕ್ಯಾಮರಾಗಳ ಮುಂದೆಯೇ ರಾಹುಲ್ ವಿರುದ್ಧ ಕೂಗಾಡಿದ್ದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಕೋಟಿಗಟ್ಟಲೆ ಜನ ನೋಡುತ್ತಾರೆ. ಕ್ಯಾಮರಾಗಳ ಮುಂದೆ ಹೀಗೆ ಮಾಡುವುದು, ಅದಕ್ಕೆ ಜನ ಪ್ರತಿಕ್ರಿಯಿಸುವುದು ಇವೆಲ್ಲಾ ನಾಚಿಕೆಗೇಡು. ಆಡುವ ಮಾತುಗಳಿಗೆ ಇತಿಮಿತಿ ಇರಬೇಕು. ಹೀಗೆ ಕೋಪದಿಂದ ಮಾತನಾಡುವುದು ತಪ್ಪು ಸಂದೇಶ ರವಾನಿಸುತ್ತದೆ ಎಂದು ಮೊಹಮ್ಮದ್ ಶಮಿ ಕ್ರಿಕೆ ಬಝ್ ಲೈವ್ ಗೆ ತಿಳಿಸಿದ್ದಾರೆ.
Advertisement