IPL 2024: ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ, ಹಲವು ದಾಖಲೆ ಸೃಷ್ಟಿಸಿದ RCB ಆಟಗಾರ!
ಗುರುವಾರ (ಮೇ 9) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ನಾಯಕ ಫಾಫ್ ಡುಪ್ಲೆಸಿಸ್ ಅವರ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಅವರು ರನ್ ಖಾತೆ ತೆರೆಯುವ ಮುನ್ನವೇ ಪಂಜಾಬ್ ತಂಡ ಕ್ಯಾಚ್ ಕೈಚೆಲ್ಲಿದ್ದರಿಂದ ಮತ್ತೊಂದು ಅವಕಾಶ ಪಡೆದರು.
ವಿಲ್ ಜಾಕ್ಸ್ ಕೂಡ 7 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ರಜತ್ ಪಟಿದಾರ್ 23 ಎಸೆತಗಳಲ್ಲಿ 3 ಬೌಂಡರಿ 6 ಭರ್ಜರಿ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ವಿರಾಟ್ ಕೊಹ್ಲಿ ಜೊತೆಯಾದ ಕ್ಯಾಮೆರೂನ್ ಗ್ರೀನ್ ಉತ್ತಮ ಆಟವಾಡಿದರು. ಏಳು ಬೌಂಡರಿಗಳು ಮತ್ತು ಆರು ಸಿಕ್ಸರ್ ಸಿಡಿಸುವ ಮೂಲಕ 195.74 ಸ್ಟ್ರೈಕ್ ರೇಟ್‌ನೊಂದಿಗೆ 47 ಎಸೆತಗಳಲ್ಲಿ 92 ರನ್ ಗಳಿಸುವ ಮೂಲಕ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಶತಕ ಗಳಿಸುವಲ್ಲಿ ವಿಫಲವಾದರೂ ಕೂಡ ಕೊಹ್ಲಿ ಹಲವು ದಾಖಲೆ ಬರೆದರು.
ದಾಖಲೆ ಬರೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಐಪಿಎಲ್ ಇತಿಹಾಸದಲ್ಲಿ 1000 ರನ್ ಪೂರೈಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ 1000 ರನ್ ಪೂರೈಸಿದ ಮೂರನೇ ತಂಡ ಪಂಜಾಬ್ ಆಗಿದೆ. ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳ ವಿರುದ್ಧ 1000 ರನ್ ಪೂರೈಸಿದ ಮೊದಲ ಆಟಗಾರರಾಗಿದ್ದಾರೆ.
ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿ ಹೊರತುಪಡಿಸಿ ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ಮಾತ್ರ ಎರಡು ತಂಡಗಳ ವಿರುದ್ಧ 1000ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ವಾರ್ನರ್ ಪಂಜಾಬ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 1000 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ವಿರುದ್ಧ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಮತ್ತೊಂದು ದಾಖಲೆ
ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ನಾಲ್ಕು ಆವೃತ್ತಿಗಳಲ್ಲಿ 600 ರನ್‌ಗಳನ್ನು ಕಲೆಹಾಕಿದ್ದು, ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್‌ನ ನಾಲ್ಕು ಆವೃತ್ತಿಗಳಲ್ಲಿ ಕೆಎಲ್ ರಾಹುಲ್ 600ಕ್ಕೂ ಹೆಚ್ಚು ರನ್ ಗಳಿಸಿ ಸಾಧನೆ ಮಾಡಿದ್ದರು. 35 ವರ್ಷದ ಕೊಹ್ಲಿ ಈ ಹಿಂದೆ 2013, 2016 ಮತ್ತು 2023 ರಲ್ಲಿ 600ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 70.44 ರ ಸರಾಸರಿಯಲ್ಲಿ 153.51 ರ ಸ್ಟ್ರೈಕ್ ರೇಟ್‌ನೊಂದಿಗೆ 634 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ 4 ಬಾರಿ ಐಪಿಎಲ್‌ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ