
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ಲೇಆಫ್‌ಗೆ ಪ್ರವೇಶಿಸಲು ಹೆಣಗಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆ ಎದುರಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಾಯಕ ರಿಷಬ್ ಪಂತ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಿದೆ. ಅಂದರೆ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಂತ್ ಆಡುವಂತಿಲ್ಲ. ಈ ನಿರ್ಧಾರ ಐಪಿಎಲ್ ಆಡಳಿತ ಮಂಡಳಿಯದ್ದಾಗಿದ್ದು ಇದನ್ನು ಬಿಸಿಸಿಐ ಖಚಿತಪಡಿಸಿದೆ. ಸದ್ಯ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ 12 ಪಂದ್ಯಗಳಿಂದ 12 ಅಂಕಗಳೊಂದಿಗೆ ಡೆಲ್ಲಿ ಐದನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರಂತರ ನಿಧಾನಗತಿಯ ಓವರಿನಿಂದಾಗಿ ರಿಷಬ್ ಪಂತ್ ಈ ಅಮಾನತು ಎದುರಿಸಬೇಕಾಯಿತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ 56ನೇ ಪಂದ್ಯದಲ್ಲಿ, ನಿಧಾನಗತಿಯ ಓವರ್ ರೇಟ್‌ಗಾಗಿ ದೆಹಲಿಗೆ ರೂ. 30 ಲಕ್ಷ ದಂಡ ವಿಧಿಸಲಾಯಿತು. ಸತತವಾಗಿ ಮೂರು ಬಾರಿ ಸಂಭವಿಸಿದ ಕಾರಣ ಪಂತ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಯಿತು. ನಿಧಾನಗತಿಯ ದರವು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ರಾಜಸ್ಥಾನ ವಿರುದ್ಧ ದೆಹಲಿ ಮೂರನೇ ಬಾರಿ ಈ ತಪ್ಪನ್ನು ಪುನರಾವರ್ತಿಸಿದೆ. ಕೇವಲ ಎರಡು ಬಾರಿ ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರಿಗೆ ದಂಡ ಮತ್ತು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ IPL 2024 ರ ಪಂದ್ಯದ ಸಂಖ್ಯೆ 56ರ ಸಮಯದಲ್ಲಿ ಅವರ ತಂಡವು ನಿಧಾನವಾದ ಓವರ್-ರೇಟ್ ಅನ್ನು ಕಾಯ್ದುಕೊಂಡಿತು. ಸ್ಲೋ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೂರನೇ ಅಪರಾಧವಾಗಿದೆ, ಆದ್ದರಿಂದ ಪಂತ್ ಗೆ 30 ಲಕ್ಷ ರೂಪಾಯಿ ದಂಡ ಮತ್ತು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಯಿತು.
ಪರಿಣಾಮ ಆಟಗಾರರು, ಆಡುವ ಹನ್ನೊಂದರ ಉಳಿದ ಸದಸ್ಯರೊಂದಿಗೆ ವೈಯಕ್ತಿಕವಾಗಿ ರೂ. 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇಕಡ 50 (ಯಾವುದು ಕಡಿಮೆಯೋ ಅದು) ದಂಡವನ್ನು ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಐಪಿಎಲ್ ನೀತಿ ಸಂಹಿತೆಯ ಕಲಂ 8ರ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್ ರೆಫರಿಯ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ನಂತರ, ಮೇಲ್ಮನವಿಯನ್ನು ಪರಿಶೀಲನೆಗಾಗಿ ಬಿಸಿಸಿಐ ಒಂಬುಡ್ಸ್‌ಮನ್‌ಗೆ ಕಳುಹಿಸಲಾಯಿತು. ಓಂಬುಡ್ಸ್‌ಮನ್ ವರ್ಚುವಲ್ ವಿಚಾರಣೆಯನ್ನು ನಡೆಸಿದರು ಮತ್ತು ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ ಎಂದು ದೃಢಪಡಿಸಿದರು.
Advertisement