
ಚೆನ್ನೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಪ್ಲೇ ಆಫ್ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಿದೆ.
ಇಂದಿನ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳ ಅಂತರಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 141 ರನ್ ಗಳಿಸಲಷ್ಟೇ ಶಕ್ತವಾಯಿತು.
ರಿಯಾನ್ ಪರಾಗ್ 47 ಹಾಗೂ ಧ್ರುವ್ ಜುರೆಲ್ 28 ಹೊರತುಪಡಿಸಿ ಯಾವೊಬ್ಬ ಆಟಗಾರನೂ ಸ್ಫೋಟಕ ಬ್ಯಾಟಿಂಗ್ ನಡೆಸದ ಕಾರಣ ಸಾಧಾರಣ ಮೊತ್ತ ದಾಖಲಿಸಿತು. ಸಿಎಸ್ ಕೆ ಪರ ಸಮರ್ಜಿತ್ ಸಿಂಗ್ 3 ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದರು.
ರಾಜಸ್ತಾನ ನೀಡಿದ 141ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 16 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಆರ್ ಸಿಬಿ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ
ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.
Advertisement