
ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಮೈದಾನದಲ್ಲಿ ಏರುದನಿಯಲ್ಲಿ ಮಾತನಾಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಎದುರು 10 ವಿಕೆಟ್ ಸೋಲು ಕಂಡ ನಂತರ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಕೆಎಲ್ ರಾಹುಲ್ ಅವರನ್ನು ಮಾಲೀಕ ಬೈದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಗೋಯೆಂಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2024ರ ಪಂದ್ಯಕ್ಕೂ ಮುನ್ನ ಕ್ರಿಕ್ಬಜ್ನೊಂದಿಗೆ ಈ ಪ್ರಕರಣದ ಕುರಿತು ಮಾತನಾಡಿದ ವಿರೇಂದ್ರ ಸೆಹ್ವಾಗ್, 'ಯಾವುದೇ ಫ್ರಾಂಚೈಸಿ ಮಾಲೀಕರು ಸಕಾರಾತ್ಮಕ ಅಥವಾ ಪ್ರೇರಕವಾಗಿ ಮಾತನಾಡಲು ಬಯಸಿದರೆ ಮಾತ್ರ ಆಟಗಾರರನ್ನು ಭೇಟಿಯಾಗಬೇಕು. ಉಳಿದ ಕ್ರಿಕೆಟ್ ಜವಾಬ್ದಾರಿಗಳನ್ನು ನಾಯಕ ಮತ್ತು ಸಹಾಯಕ ಸಿಬ್ಬಂದಿಯ ಹೆಗಲಿಗೆ ಬಿಡಬೇಕು ಎಂದಿದ್ದಾರೆ.
ಆಟಗಾರರ ಉತ್ತೇಜಿಸಬೇಕಾದ ಮಾಲೀಕರೇ ಈ ರೀತಿ ಮಾಡುವುದು ಸರಿಯಲ್ಲ
ಇದೇ ವೇಳೆ ತಂಡದ ಮಾಲೀಕರ ಜವಾಬ್ದಾರಿ ಕುರಿತು ಮಾತನಾಡಿರುವ ಸೆಹ್ವಾಗ್, 'ಡ್ರೆಸ್ಸಿಂಗ್ ರೂಮ್ನಲ್ಲಿ ಅಥವಾ ಪತ್ರಿಕಾಗೋಷ್ಠಿಯಲ್ಲಿ ಆಟಗಾರರನ್ನು ಭೇಟಿಯಾಗುವ ಸಂದರ್ಭದಲ್ಲಿ ಮಾಲೀಕರು ಪ್ರೇರೇಪಿಸಬೇಕು. ಆದರೆ, ಏನು ನಡೆಯುತ್ತಿದೆ? ಸಮಸ್ಯೆ ಏನು? ಅಥವಾ ತಂಡದ ನಿರ್ವಹಣಾ ಸದಸ್ಯರಲ್ಲಿ ಒಬ್ಬರನ್ನು ಹಿಡಿದು ನಿರ್ದಿಷ್ಟ ಆಟಗಾರನ ಬಗ್ಗೆ ಮಾಲೀಕರು ಬಂದು ಕೇಳುವ ಹಕ್ಕಿಲ್ಲ. ಹಾಗಾಗಿ ಮಾಲೀಕರು ಆಟಗಾರರೊಂದಿಗೆ ಭಾಗಿಯಾಗಬಾರದು ಅಥವಾ ಹೀಗೇ ಹೇಳಿದ್ದಕ್ಕೆ ನನ್ನ ಮೇಲೆ ಕೋಪಗೊಳ್ಳದಿರುವುದು ಉತ್ತಮ ಎಂದು ಹೇಳಿದ್ದಾರೆ.
ನಿಮಗೇ ನಷ್ಟ
ಉದ್ಯಮಿಯಾಗಿ ಅವರು ಎಸ್ಆರ್ಹೆಚ್ ವಿರುದ್ಧ ಎಲ್ಎಸ್ಜಿ ಸೋಲಿನ ನಂತರ ಯಾವುದೇ ನಷ್ಟ ಅನುಭವಿಸಿಲ್ಲ. ತಂಡವು ಸೋಲು-ಗೆಲುವಿನ ಪ್ರದರ್ಶನದ ನಡುವೆಯೂ ಮಾಲೀಕರು ಸಾಕಷ್ಟು ಲಾಭ ಗಳಿಸುತ್ತಾರೆ. ಮಾಲೀಕರು ಎದುರಿಸಬಹುದಾದ ಏಕೈಕ ನಷ್ಟವೆಂದರೆ ರಾಹುಲ್ 2024ರ ಋತುವಿನ ನಂತರ ಫ್ರಾಂಚೈಸಿ ತೊರೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ನೀವು 400 ಕೋಟಿ ಲಾಭ ಗಳಿಸುತ್ತಿದ್ದರೂ ನಿಮಗೆ ತೊಂದರೆ ಏನು? ನನ್ನ ಪ್ರಕಾರ, ತಂಡದ ವಿಚಾರಗಳಿಗೆ ಸಂಬಂಧಿಸಿ ತಲೆ ಹಾಕಬಾರದ ವಿಚಾರ ಇದಾಗಿದೆ. ನೀವಿದನ್ನು ನೋಡಿಕೊಳ್ಳಲೆಂದೇ ತಂಡವೊಂದಿದೆ. ಏನೇ ಆದರೂ ಸಹ ತಪ್ಪದೇ ಲಾಭ ಗಳಿಸುತ್ತೀರಿ. ಹಾಗಾಗಿ ನಿಮ್ಮ ಕೆಲಸ ಏನಿದ್ದರೂ ಆಟಗಾರರನ್ನು ಪ್ರೇರೇಪಿಸುವುದಷ್ಟೇ ಎಂದಿದ್ದಾರೆ.
ನಾನು ಪಂಜಾಬ್ ತಂಡ ತೊರೆದ ಬಳಿಕ ಏನಾಗಿದೆ?
ಇಂತಹ ವರ್ತನೆಗಳಿಂದ ನಿಮಗೆ ಸಾಕಷ್ಟು ಪರಿಣಾಮಗಳು ಬೀರುತ್ತವೆ. ಆಟಗಾರರ ಮನಸ್ಥಿತಿಯೂ ಬದಲಾಗುತ್ತದೆ. ಐಪಿಎಲ್ನಲ್ಲಿರುವುದು ಇದೊಂದೇ ಫ್ರಾಂಚೈಸಿಯಲ್ಲ ಎಂದು ಆಟಗಾರ ಭಾವಿಸುತ್ತಾನೆ. ಈ ತಂಡವನ್ನು ತೊರೆದರೆ, ಬೇರೆ ಯಾರಾದರೂ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಅವರಲ್ಲಿರುತ್ತದೆ. ಆದರೆ ನೀವು ಒಬ್ಬ ಆಟಗಾರನನ್ನು ಕಳೆದುಕೊಂಡರೆ ನಿಮ್ಮ ಗೆಲ್ಲುವ ಸಾಧ್ಯತೆಗಳು ಶೂನ್ಯ. ನಾನು ಪಂಜಾಬ್ ತೊರೆದಾಗ ಆ ತಂಡ ಐದನೇ ಸ್ಥಾನದಲ್ಲಿತ್ತು. ಆ ಬಳಿಕ ಬೇರೆ ಯಾವುದೇ ಋತುಗಳಲ್ಲಿ 5ನೇ ಸ್ಥಾನ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.
Advertisement