IPL 2024: ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಡಕೌಟ್, ಕಳಪೆ ದಾಖಲೆ ಬರೆದ RCBಯ Dinesh Karthik
ಬೆಂಗಳೂರು: ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ಹೀನಾಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ (IPL 2024) 62ನೇ ಪಂದ್ಯದ ಮೂಲಕ ದಿನೇಶ್ ಕಾರ್ತಿಕ್ (Dinesh Karthik) ಈ ಅನಗತ್ಯ ದಾಖಲೆ ಬರೆದಿದ್ದು, ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡಿಕೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಸೊನ್ನೆಗೆ ಔಟಾದ ಬ್ಯಾಟರ್ ಎಂಬ ಹೀನಾಯ ದಾಖಲೆಯೊಂದು ದಿನೇಶ್ ಕಾರ್ತಿಕ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ರೋಹಿತ್ ಶರ್ಮಾ ಹೆಸರಿನಲ್ಲಿದ್ದವು.
ಐಪಿಎಲ್ನಲ್ಲಿ 127 ಇನಿಂಗ್ಸ್ ಆಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಒಟ್ಟು 17 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಧಿಕ ಬಾರಿ ಡಕ್ ಔಟ್ ಆದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಈವರೆಗೆ 251 ಇನಿಂಗ್ಸ್ ಆಡಿದ್ದು, ಈ ವೇಳೆ 17 ಬಾರಿ ಸೊನ್ನೆ ಸುತ್ತಿದ್ದಾರೆ. ಇದೀಗ ಮ್ಯಾಕ್ಸ್ವೆಲ್ ಹಾಗೂ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಡಿಕೆ ಅಗ್ರಸ್ಥಾನಕ್ಕೇರಿದ್ದಾರೆ.
ಐಪಿಎಲ್ನಲ್ಲಿ ಇದುವರೆಗೆ 232 ಇನಿಂಗ್ಸ್ ಆಡಿರುವ ದಿನೇಶ್ ಕಾರ್ತಿಕ್ ಒಟ್ಟು 18 ಬಾರಿ ಡಕ್ ಔಟ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎಂಬ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ.
Most ducks in the IPL
18 - Dinesh Karthik
17 - Glenn Maxwell
17 - Rohit Sharma
16 - Piyush Chawla
16 - Sunil Narine
ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.1 ಓವರ್‌ಗೆ 10 ವಿಕೆಟ್ ನಷ್ಟಕ್ಕೆ 140 ರನ್ ಗಳಿಸುವ ಮೂಲಕ 47 ರನ್‌ಗಳ ಸೋಲನ್ನಪ್ಪಿತು. ಈ ಭರ್ಜರಿ ಗೆಲುವಿನ ಮೂಲಕ ಆರ್‌ಸಿಬಿ ಪಡೆ ಅಂಕಪಟ್ಟಿಯಲ್ಲಿ +0.39ರ ರನ್‌ರೇಟ್ ಜೊತೆಗೆ ಆಡಿರುವ 13 ಪಂದ್ಯದಲ್ಲಿ 6ರಲ್ಲಿ ಗೆದ್ದು 7ರಲ್ಲಿ ಸೋಲನ್ನಪ್ಪಿದೆ. ಈ ಮೂಲಕ ಆರ್‌ಸಿಬಿ ತಂಡ 5ನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೇ ಈ ಗೆಲುವಿನ ಮೂಲಕ ಆರ್‌ಸಿಬಿ ಈ ಬಾರಿಯ ಪ್ಲೇಆಫ್ ರೇಸ್‌ನಲ್ಲಿ ಇನ್ನೂ ಸಹ ಉಳಿದುಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ