
ಇಂಡಿಯನ್ ಪ್ರೀಮಿಯರ್ ಲೀಗ್ 2024 ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಕೊನೆಯ ಓವರ್‌ನಲ್ಲಿ 17 ರನ್ ಬೇಕಿದ್ದಾಗ ಯಶ್ ದಯಾಳ್ ಅದ್ಭುತವಾದ ಬೌಲಿಂಗ್ ತಂಡದ ಗೆಲುವಿಗೆ ನೆರವಾಯಿತು. ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಆರ್‌ಸಿಬಿ ಪಂದ್ಯದಲ್ಲಿ ಯಶ್ ದಯಾಳ್ ಅವರ ಅದ್ಬುತ ಕೊನೆಯ ಓವರ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಶ್ಲಾಘಿಸಿದ್ದಾರೆ.
ಪಂದ್ಯದ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ 18ಕ್ಕಿಂತ ಹೆಚ್ಚು ರನ್ ಗಳಿಸಿದರೆ, ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಿದ್ದರು. ಆದರೆ, ಆರ್‌ಸಿಬಿ ಸಿಎಸ್‌ಕೆ ವಿರುದ್ಧ 27 ರನ್‌ಗಳಿಂದ ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆದ 4ನೇ ತಂಡವಾಯಿತು.
ಆರ್‌ಸಿಬಿ ಬೌಲರ್ ಯಶ್ ದಯಾಳ್ ಅವರ ಚಿತ್ರವನ್ನು ರಿಂಕು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ಇದು ದೇವರ ಆಟ' ಎಂದು ಶೀರ್ಷಿಕೆ ನೀಡಿದ್ದಾರೆ. ಐಪಿಎಲ್ 2023ನೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧದ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ರಿಂಕು ಸಿಂಗ್ ಯಶ್ ದಯಾಳ್ ಅವರ ಐದು ಎಸೆತಗಳಿಗೆ 5 ಸಿಕ್ಸರ್ ಸಿಡಿಸಿದ್ದರು. ಬಳಿಕ ಯಶ್ ದಯಾಳ್ ಬೌಲಿಂಗ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಕೊನೆಯ ಓವರ್‌ನಲ್ಲಿ ಕೆಕೆಆರ್‌ಗೆ 28 ರನ್‌ಗಳ ಅಗತ್ಯವಿದ್ದಾಗ, ರಿಂಕು ಸಿಂಗ್ ಅವರು ದಯಾಲ್ ಅವರ ಎಸೆತದಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಜಿಟಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಈ ಘಟನೆಯಿಂದ ರಿಂಕು ಸಿಂಗ್ ರಾತ್ರೋರಾತ್ರಿ ಸ್ಟಾರ್ ಆದರೆ, ದಯಾಳ್ ವ್ಯಾಪಕ ಟೀಕೆಯನ್ನು ಎದುರಿಸಬೇಕಾಯಿತು. ಹೀಗಿದ್ದರೂ, ಆರ್‌ಸಿಬಿ ತಂಡ ಅವರ ಮೇಲೆ ನಂಬಿಕೆಯನ್ನಿಟ್ಟು ಐಪಿಎಲ್ 2024ನೇ ಹರಾಜಿನಲ್ಲಿ ಅವರನ್ನು 5 ಕೋಟಿ ರೂ.ಗೆ ಖರೀದಿಸಿತು. ಇದೀಗ ಆರ್‌ಸಿಬಿಯ ನಂಬಿಕೆಯನ್ನು ಉಳಿಸಿಕೊಂಡಿರುವ ದಯಾಳ್, ಸಿಎಸ್‌ಕೆ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.
ದಯಾಳ್ ಅವರ ಪ್ರದರ್ಶನಕ್ಕೆ ಮೆಚ್ಚಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟ್ವಿಟರ್ ಖಾತೆಯು ರಿಂಕು ಸಿಂಗ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿದೆ. ಪ್ರತಿ ಬಾರಿ ಹಿನ್ನಡೆಯಾದಾಗಲೆಲ್ಲಾ, ನೀವು ಅದನ್ನು ಮೆಟ್ಟಿ ನಿಂತು ಹೋರಾಡುವ ಧೈರ್ಯ ಹೊಂದಿದ್ದರೆ ನಿಮಗಾಗಿ ಒಂದು ಉತ್ತಮ ಪುನರಾಗಮನವಾಗುತ್ತದೆ. ಚೆನ್ನಾಗಿದೆ, ಯಶ್ ಎಂದು ಬರೆದಿದ್ದಾರೆ.
ಕೊನೆಯ ಓವರ್‌ನಲ್ಲಿ ದಯಾಳ್ 7 ರನ್ ನೀಡಿ, ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕಿತ್ತಿದ್ದಲ್ಲದೆ, ಡಾಟ್ ಬಾಲ್ ಎಸೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಸ್ವಲ್ಪ ಭಾವುಕರಾಗಿ ಕಾಣಿಸಿಕೊಂಡರು.
Advertisement