
ಬೆಂಗಳೂರು: ತೀವ್ರ ಕುತೂಹಲ ಕೆರೆಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಆರ್ ಸಿಬಿ ವಿರೋಚಿತ ಗೆಲುವು ಸಾಧಿಸಿ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.
ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 219 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 27ರನ್ ಗಳ ಅಂತರದಲ್ಲಿ ಸೋಲುಕಂಡಿತು.
ಈ ಪಂದ್ಯದ ಪ್ರತೀ ಹಂತದಲ್ಲೂ ಗೆಲುವು ಅತ್ತ-ಇತ್ತ ಚಲಿಸುತ್ತಿತ್ತು. ಅಂತಿಮ ಹಂತದವರೆಗೂ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ ಯಶ್ ದಯಾಳ್ ಎಸೆದೆ ಅಂತಿಮ ಓವರ್ ಚೆನ್ನೈ ಕೈಯಿಂದ ಗೆಲುವು ಕಸಿದು ಆರ್ ಸಿಬಿಗೆ ನೀಡಿತು.
ಮ್ಯಾಜಿಕಲ್ ಕೊನೆಯ ಓವರ್
ಈ ಹಂತದಲ್ಲಿ ಚೆನ್ನೈಗೆ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಲು 17 ರನ್ ಗಳ ಅವಶ್ಯತೆ ಇತ್ತು. ಈ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ರೀಸ್ ನಲ್ಲಿದ್ದರು. ಮೊದಲ ಎಸೆತ ಎದುರಿಸಿದ ಧೋನಿ, ಯಶ್ ದಯಾಳ್ ಎಸೆದ ಮೊದಲ ಎಸೆತವನ್ನೇ ಫೈನ್ ಲೆಗ್ ನತ್ತ ಭಾರಿಸಿ ಸಿಕ್ಸರ್ ಗಿಟ್ಟಿಸಿದರು. ಈ ಹಂತದಲ್ಲಿ ಚೆನ್ನೈ ಗೆಲುವು ಪಕ್ಕಾ ಎಂಬಂತಾಗಿತ್ತು. ಆದರೆ ಮುಂದಿನ ಎಸೆತದಲ್ಲೇ ಮ್ಯಾಜಿಕ್ ಮಾಡಿದ ಯಶ್ ದಯಾಳ್ ಧೋನಿ ವಿಕೆಟ್ ಪಡೆದರು. ಯಶ್ ಎಸೆದ 2ನೇ ಎಸೆತವನ್ನು ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ ನತ್ತ ಸ್ವೈಪ್ ಮಾಡಲು ಹೋದ ಧೋನಿ ಸ್ವಪ್ನಿಲ್ ಸಿಂಗ್ ಕ್ಯಾಚ್ ನೀಡಿ ಔಟಾದರು.
ಬಳಿಕ ನಡೆದದ್ದೇ ಮ್ಯಾಜಿಕ್. ಧೋನಿ ಔಟಾಗುತ್ತಿದ್ದಂತೆಯೇ ಆರ್ ಸಿಬಿ ಪಾಳಯದಲ್ಲಿ ಗೆಲುವಿವ ಆಸೆಯ ಚಿಗುರೊಡೆಯಿತು. ಅದಕ್ಕೆ ಇಂಬು ನೀಡುವಂತೆ ಯಶ್ ಕೂಡ ಮೂರನೇ ಎಸೆತವನ್ನು ಕರಾರುವಕ್ಕಾಗಿ ಮಾಡಿದರು. ಧೋನಿ ಬಳಿಕ ಕ್ರೀಸ್ ಗೆ ಬಂದ ಶಾರ್ದುಲ್ ಠಾಕೂರ್ 3ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. 4ನೇ ಎಸೆತದಲ್ಲಿ ಯಶ್ ದಯಾಳ್ ಎಸೆತ ಸ್ಲೋ ಎಸೆತದಲ್ಲಿ ಸಿಂಗಲ್ ರನ್ ಪಡೆದು ರವೀಂದ್ರ ಜಡೇಜಾಗೆ ಅವಕಾಶ ಮಾಡಿಕೊಟ್ಟರು.
ಆದರೆ ಅಚ್ಚರಿ ಎಂದರೆ 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 42ರನ್ ಚಚ್ಚಿದ್ದ ಜಡೇಜಾ ಕೂಡ ನಿರ್ಣಾಯಕ 5ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಈ ಹಂತದಲ್ಲಿ ಆರ್ ಸಿಬಿ ಗೆಲುವು ಪಕ್ಕಾ ಆಗಿತ್ತು. ಅಂತಿಮ ಎಸೆತವನ್ನೂ ಯಶ್ ದಯಾಳ್ ರನ್ ನೀಡದೆ ಆರ್ ಸಿಬಿ ಗೆ ವಿರೋಚಿತ ಗೆಲುವು ತಂದು ಕೊಟ್ಟರು.
ಮೊದಲ ಎಸೆತದಲ್ಲಿ ಸಿಕ್ಸರ್ ನೀಡಿ ಆರ್ ಸಿಬಿ ಅಭಿಮಾನಿಗಳ ಪಾಲಿಗೆ ವಿಲ್ಲನ್ ಆಗಿದ್ದ ಯಶ್ ದಯಾಳ್ ಅಂತಿಮ ಎಸೆತದ ಹೊತ್ತಿಗೆ ಹೀರೋ ಆಗಿದ್ದರು.
Advertisement