
ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ.
ಆರ್ ಸಿಬಿ ನೀಡಿದ 219 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 27ರನ್ ಗಳ ಅಂತರದಲ್ಲಿ ಸೋಲುಕಂಡಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ರುತುರಾಜ್ ಗಾಯಕ್ವಾಡ್ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಬಳಿಕ ಕ್ರೀಸ್ ಗೆ ಬಂದ ಡೆರೆಲ್ ಮಿಚೆಲ್ 4 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಅರ್ಧಶತಕ ಜೊತೆಯಾಟವಾಡಿದರು. ಈ ಹಂತದಲ್ಲಿ 33 ರನ್ ಗಳಿಸಿದ್ದ ರಹಾನೆ ಲಾಕಿ ಫರ್ಗುಸನ್ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಉತ್ತಮ ಬ್ಯಾಟಿಂಗ್ ಮಾಡಿ 5 ಬೌಂಡರಿ ಮತ್ತು 3 ಸಿಕ್ಸರ್ ಗಳ ನೆರವಿನಿಂದ 61ರನ್ ಗಳಿಸಿ ಅನಗತ್ಯ ರನೌಟ್ ಗೆ ಬಲಿಯಾದರು. ಬಳಿಕ ಕ್ರೀಸ್ ಗೆ ಬಂದ ಶಿವಂದುಬೆ 7ರನ್ ಗಳಿಸಿ ಔಟಾದರು. ಸ್ಯಾಂಟ್ನರ್ 3ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಒಂದು ಹಂತದಲ್ಲಿ ಪಂದ್ಯ ಕಸಿಯುವ ಪ್ರಯತ್ನ ಮಾಡಿದರು.
ಆದರೆ ಅಂತಿಮ ಓವರ್ ನಲ್ಲಿ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ ಧೋನಿ ಚೆನ್ನೈಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಯಶ್ ದಯಾಳ್ ಎಸೆದ 2ನೇ ಎಸೆತವನ್ನು ಸ್ವೈಪ್ ಮಾಡಲು ಹೋಗಿ ಸ್ವಪ್ನಿಲ್ ಸಿಂಗ್ ಗೆ ಕ್ಯಾಚ್ ನೀಡಿ ಔಟಾದರು. ಈ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ ಗೆ ಅರ್ಹತೆ ಗಿಟ್ಟಿಸಲು 3 ಎಸೆತಗಳಲ್ಲಿ 11 ರನ್ ಗಳ ಅವಶ್ಯಕತೆ ಇತ್ತು. ಆದರೆ ಯಶ್ ದಯಾಳ್ ಮೂರು ಎಸೆತಗಳನ್ನು ಅದ್ಭುತವಾಗಿ ಎಸೆದು ಕೇವಲ 1 ರನ್ ನೀಡಿ ಆರ್ ಸಿಬಿ ಗೆಲುವಿನ ರೂವಾರಿಯಾದರು.
ಅಂತಿಮವಾಗಿ ಚೆನ್ನೈ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191ರನ್ ಗಳಿಸಿ 27 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
Advertisement