
ಬೆಂಗಳೂರು: ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಆರ್ಭಟ ಮುಂದುವರೆದಿದ್ದು, ಇಂದಿನ ಪಂದ್ಯದಲ್ಲಿ ಐಪಿಎಲ್ ಇತಿಹಾಸದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 47 ರನ್ ಗಳಿಸಿದರು. ಅಂತೆಯೇ ಹಾಲಿ ಟೂರ್ನಿಯಲ್ಲಿ ತಮ್ಮ ರನ್ ಗಳಿಕೆಯನ್ನು 708ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದ ಅಪರೂಪದ ದಾಖಲೆಗೆ ಪಾತ್ರರಾದರು.
ಐಪಿಎಲ್ ಇತಿಹಾಸದಲ್ಲೇ 2 ಸೀಸನ್ ಗಳಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ 2016ರಲ್ಲಿ ಈ ಸಾಧನೆ ಮಾಡಿದ್ದರು. ಆ ಟೂರ್ನಿಯಲ್ಲಿ ಕೊಹ್ಲಿ 16 ಪಂದ್ಯಗಳಿಂದ 81.08 ಸರಾಸರಿಯಲ್ಲಿ 152ಕ್ಕೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ 973 ರನ್ ಕಲೆಹಾಕಿದ್ದರು. ಅಂತೆಯೇ 4 ಶತಕ ಮತ್ತು 7 ಅರ್ಧಶತಕ ದಾಖಲಿಸಿದ್ದರು.
ಹಾಲಿ ಟೂರ್ನಿಯಲ್ಲಿ ಕೊಹ್ಲಿ ಇಂದಿನ ಪಂದ್ಯವೂ ಸೇರಿದಂತೆ 14ಪಂದ್ಯಗಳನ್ನಾಡಿದ್ದು, 64.36 ಸರಾಸರಿಯಲ್ಲಿ 155.60 ಸ್ಟ್ರೈಕ್ ರೇಟ್ ನಲ್ಲಿ 708 ರನ್ ಕಲೆಹಾಕಿದ್ದಾರೆ.
Advertisement