
ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಸ್ವಂತ ಸಾಮರ್ಥ್ಯ ಮತ್ತು ತಂಡವನ್ನು ನಂಬುವ ವ್ಯಕ್ತಿ. ಐಪಿಎಲ್ 2024ನೇ ಆವೃತ್ತಿಯ ಆರಂಭದಲ್ಲಿ ಆಡಿದ್ದ ಮೊದಲ 8 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಸೋಲುಗಳೊಂದಿಗೆ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆಗ ತಂಡಕ್ಕೆ ಇದ್ದದ್ದು ಕೇವಲ ಶೇ 1ರಷ್ಟು ಚಾನ್ಸ್ ಅಷ್ಟೆ. ಹೀಗಿದ್ದಾಗಲೂ, ಕೊಹ್ಲಿ ತನ್ನನ್ನು ಮತ್ತು ತನ್ನ ಸಹ ಆಟಗಾರರ ಮೇಲಿನ ನಂಬಿಕೆಯನ್ನು ಬಿಟ್ಟಿರಲಿಲ್ಲ. ಅದಾದ ನಂತರ RCB ನಂತರ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪ್ಲೇಆಫ್ ಪ್ರವೇಶಿಸಿದ್ದೂ ಆಯಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಆರ್‌ಸಿಬಿಯ ಉತ್ತಮ ಪ್ರದರ್ಶನ ಪ್ಲೇಆಫ್‌ಗೆ ದಾರಿಮಾಡಿಕೊಟ್ಟಿತ್ತು.
ಈ ಬಾರಿ ಟೂರ್ನಿಯಿಂದ ಹೊರಬಿದ್ದಾಯಿತು ಎಂದೇ ಹೇಳುತ್ತಿದ್ದ ಆರ್‌ಸಿಬಿ ತಂಡ ಫಿನಿಕ್ಸ್‌ನಂತೆ ಎದ್ದು ನಿಂತಿತು. ಇದೀಗ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು, ವಿರಾಟ್ ಕೊಹ್ಲಿ ಅವರ '1 ಪರ್ಸೆಂಟ್ ಚಾನ್ಸ್' ಸಿದ್ಧಾಂತ' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಯಶಸ್ಸಿನ ಅವಕಾಶ ಕೇವಲ ಶೇ 1 ರಷ್ಟಿದ್ದರೂ ಸಹ, ನಂಬಿಕೆಯನ್ನಿಡುವ ಶಕ್ತಿಯ ಬಗ್ಗೆ ಕೊಹ್ಲಿ ಯುವಕರ ಗುಂಪಿನೊಂದಿಗೆ ಮಾತನಾಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಐಪಿಎಲ್ 2024 ರ ಆವೃತ್ತಿಯಲ್ಲಿ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಕೇವಲ ಶೇ 1 ಪರ್ಸೆಂಟ್ ಇತ್ತು. ಅಂಕಪಟ್ಟಿಯಲ್ಲಿ ತಂಡವು 10ನೇ ಸ್ಥಾನದಲ್ಲಿತ್ತು. ಆದರೆ, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಹಂತ ಹಂತವಾಗಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಯಿತು.
'ಕೇವಲ ಶೇ 1ರಷ್ಟು ಅವಕಾಶವಿದೆ ಮತ್ತು ಕೆಲವೊಮ್ಮೆ ಈ ಅವಕಾಶವೇ ಸಾಕಷ್ಟು ಉತ್ತಮವಾಗಿರುತ್ತದೆ. ಆದರೆ, ಆ ಶೇ ಒಂದರಷ್ಟು ಅವಕಾಶದ ಬಗ್ಗೆ ನೀವು ಹೇಗೆ ಯೋಚಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಆ ಶೇ 1ರಷ್ಟು ಅವಕಾಶವನ್ನು ನೀವು 10 ಆಗಿ ಪರಿವರ್ತಿಸಲು ಮತ್ತು 10 ಅನ್ನು ಶೇ 30ರಷ್ಟಾಗಿ ಬೆಳೆಸಲು ನೀವು ಎಲ್ಲವನ್ನೂ ಮಾಡಲು ಸಿದ್ಧರಿದ್ದೀರಾ?. ಸಿದ್ಧರಿದ್ದೀರ ಎಂದಾರಗೆ ಅಂತಿಮವಾಗಿ ಅದರಿಂದ ಏನಾದರೂ ಮಾಂತ್ರಿಕತೆ ಹೊರಬರಬಹುದು' ಎಂದು ವಿರಾಟ್ ಹೇಳಿದ್ದಾರೆ.
ಆರ್‌ಸಿಬಿ ಪ್ಲೇಆಫ್ ಸ್ಥಾನವನ್ನು ಹೇಗೆ ಪಡೆಯಿತು
ಈ ಆವೃತ್ತಿಯ ಆರಂಭದಲ್ಲಿ 8 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾತ್ರ ಏಕೈಕ ಗೆಲುವು ಸಾಧಿಸಿತ್ತು. 7 ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು ಮತ್ತು ಪ್ಲೇಆಫ್ ರೇಸ್‌ನಿಂದ ಹೊರಗುಳಿಯಿತು. ಆದರೆ, ಮುಂದಿನ ಆರು ಪಂದ್ಯಗಳಲ್ಲಿ ತಂಡದ ಗೆಲುವು ಮತ್ತು ಇತರ ಫಲಿತಾಂಶಗಳು ಅವರ ಪರವಾಗಿದ್ದರಿಂದ ಬೆಂಗಳೂರು ತಂಡವು ಉತ್ತಮ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆರ್‌ಸಿಬಿ ತಂಡವು ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ 14 ಅಂಕಗಳನ್ನು ಗಳಿಸಿತ್ತು. ಆದರೆ, ಉತ್ತಮ ನೆಟ್ ರನ್ ರೇಟ್‌ನಿಂದಾಗಿ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.
Advertisement