
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಬಲ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದೆ.
ಅಹ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನೀಡಿದ 160 ರನ್ ಗಳ ಗುರಿಯನ್ನು ಕೋಲ್ಕತಾ ತಂಡ 15 ಓವರ್ ನಲ್ಲೇ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಹೈದರಾಬಾದ್ ನೀಡಿದ 160 ರನ್ ಗಳ ಗುರಿ ಕೋಲ್ಕತಾಗೆ ಯಾವುದೇ ಹಂತದಲ್ಲೂ ಸವಾಲು ಎನಿಸಲೇ ಇಲ್ಲ. ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕೋಲ್ಕತಾ, ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುರಿ ಮುಟ್ಟಿ ಅರ್ಹವಾಗಿಯೇ ಫೈನಲ್ ಪ್ರವೇಶಿಸಿತು.
ಕೋಲ್ಕತಾಗೆ ಆರಂಭಿಕರಾದ ಗುರ್ಬಾಜ್ (23 ರನ್) ಮತ್ತು ಸುನಿಲ್ ನರೇನ್ (21ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ ಗೆ 44 ರನ್ ಗಳ ಉತ್ತಮ ಜೊತೆಯಾಟವಾಡಿತು. ಬಳಿಕ ಜೊತೆಗೂಡಿದ ವೆಂಕಟೇಶ್ ಅಯ್ಯರ್ (51 ರನ್) ಮತ್ತು ಶ್ರೇಯಸ್ ಅಯ್ಯರ್ (58 ರನ್) ಜೋಡಿ ಶತಕದ ಜೊತೆಯಾಟವಾಡಿ ಗೆಲುವಿನ ಔಪಚಾರಿಕತೆ ಮುಗಿಸಿತು.
ಹೈದರಾಬಾದ್ ಪರ ನಟರಾಜನ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 1 ವಿಕೆಟ್ ಪಡೆದರು.
Advertisement