
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕು ವಿಕೆಟ್‌ಗಳಿಂದ ಸೋಲು ಕಂಡಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮುಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಬಲಿಷ್ಠವಾಗಿ ಮರಳಲಿದೆ ಎಂದಿದ್ದಾರೆ.
ಈ ಆವೃತ್ತಿಯ ಆರಂಭದಲ್ಲಿ ಆಡಿದ್ದ 8 ಪಂದ್ಯಗಳಲ್ಲಿ 7ರಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಬಳಿಕ ಆಡಿದ 6 ಪಂದ್ಯಗಳಲ್ಲಿ ಸತತ ಗೆಲುವು ಕಾಣುವ ಮೂಲಕ ಐಪಿಎಲ್ 2024 ನೇ ಆವೃತ್ತಿಯ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆದಾಗ್ಯೂ, ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿತ್ತು.
ಆರ್‌ಸಿಬಿ ಆಟಗಾರರು ಟೂರ್ನಿಯಲ್ಲಿ ಅವರ ಮೇಲೆ ನಂಬಿಕೆ ಬರುವಂತೆ ಪ್ರದರ್ಶನ ನೀಡಿದ್ದಕ್ಕಾಗಿ ನನಗೆ ಹೆಮ್ಮೆ ಇದೆ. ಬೆಂಗಳೂರು ಮೂಲದ ಫ್ರಾಂಚೈಸಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಖಂಡಿತವಾಗಿಯೂ ಪ್ರಶಸ್ತಿಯನ್ನು ಪಡೆಯುತ್ತದೆ ಎಂದು ಆರ್‌ಸಿಬಿಯ ಮಾಜಿ ಆಟಗಾರರೂ ಆಗಿರುವ ಡಿವಿಲಿಯರ್ಸ್ ಹೇಳಿದ್ದಾರೆ.
'ಸೋಲುವುದು ಯಾವಾಗಲೂ ನೋವಿನ ಸಂಗತಿ. ಆದರೆ ಅಭಿಮಾನಿಯಾಗಿ, ಮೇ ತಿಂಗಳ ಆರಂಭದಲ್ಲಿ ಎಲ್ಲ ಭರವಸೆಗಳು ಕಳೆದುಹೋದಂತೆ ತೋರುತ್ತಿದ್ದರೂ ಸಹ, ಉತ್ತಮ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಮೇಲುಗೈ ಸಾಧಿಸಿದ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದಿನ ವರ್ಷ ಆರ್‌ಸಿಬಿ ಬಲಿಷ್ಠವಾಗಿ ಹಿಂತಿರುಗುತ್ತದೆ ಮತ್ತು ಕಪ್ ಅನ್ನು ತರುತ್ತದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ' ಎಂದು ಡಿ ವಿಲಿಯರ್ಸ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ಎದುರು ಸೋತ ಆರ್‌ಸಿಬಿ
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.
ನಾಯಕ ಫಾಫ್ ಡುಪ್ಲೆಸಿಸ್ 14 ಎಸೆತಗಳಲ್ಲಿ 17 ರನ್, ವಿರಾಟ್ ಕೊಹ್ಲಿ 34 ರನ್, ಕ್ಯಾಮೆರಾನ್ ಗ್ರೀನ್ 27 ರನ್, ರಜತ್ ಪಟಿದಾರ್ 34 ರನ್, ದಿನೇಶ್ ಕಾರ್ತಿಕ್ 11 ರನ್, ಮಹಿಪಾಲ್ ಲೊಮ್ರೋರ್ 32 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದರು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಿಯಾನ್ ಪರಾಗ್ 36 ಮತ್ತು ಶಿಮ್ರಾನ್ ಹೆಟ್ಮೆಯರ್ 32 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಗೆಲುವಿಗೆ ನೆರವಾದರು.
Advertisement