
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಬುಧವಾರ ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧದ ಎಲಿಮಿನೇಟರ್ ಪಂದ್ಯದ ಸೋಲಿನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಐಪಿಎಲ್ ತನ್ನ ಕೊನೆಯ ಆವೃತ್ತಿ ಎಂದು ಈಗಾಗಲೇ ಸುಳಿವು ನೀಡಿದ್ದ ಕಾರ್ತಿಕ್, ಅಹಮದಾಬಾದ್‌ನಲ್ಲಿ ಪಂದ್ಯದ ಮುಕ್ತಾಯದ ನಂತರ ಸಹ ಆಟಗಾರರಿಂದ ಗಾರ್ಡ್ ಆಫ್ ಹಾನರ್ ಪಡೆದರು.
ಕಾರ್ತಿಕ್ ಸ್ವತಃ ಈ ವಿಷಯದ ಬಗ್ಗೆ ಮಾತನಾಡದಿದ್ದರೂ, ಲೀಗ್‌ನ ಪ್ರಸಾರಕರು ಎಲಿಮಿನೇಟರ್ ಪಂದ್ಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಕಾರ್ತಿಕ್ ಅವರ ನಿವೃತ್ತಿಯನ್ನು ದೃಢಪಡಿಸಿದ್ದಾರೆ. 16 ವರ್ಷಗಳ ಹಿಂದೆ ಟಿ20 ಲೀಗ್‌ಗೆ ಪದಾರ್ಪಣೆ ಮಾಡಿದ ಕಾರ್ತಿಕ್, ಈ ಸ್ವರೂಪದಲ್ಲಿ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿ ಹೆಸರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಐಪಿಎಲ್‌ನ ಡಿಜಿಟಲ್ ಬ್ರಾಡ್‌ಕಾಸ್ಟರ್ ಜಿಯೋ ಸಿನಿಮಾ, RCB ವಿಕೆಟ್-ಕೀಪರ್ ಬ್ಯಾಟರ್‌ಗೆ ಗೌರವ ಸಲ್ಲಿಸಿದೆ. 16 ವರ್ಷಗಳು, 6 ತಂಡಗಳ ನೆನಪುಗಳು. ಧನ್ಯವಾದಗಳು ಡಿಕೆ ಎಂದಿದೆ. ಪೋಸ್ಟರ್‌ನಲ್ಲಿ ಈಗಷ್ಟೇ ನಿವೃತ್ತಿ ಎಂದಿರುವ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ಧಿಕ್ ಪಾಂಡ್ಯ ಅವರತ್ತ ಕೈಬೀಸಿದ್ದಾರೆ.
ಪಂದ್ಯದ ಬಳಿಕ ಪರಸ್ಪರ ತಬ್ಬಿಕೊಂಡ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಭಾವುಕರಾಗಿ ಕಂಡುಬಂದರು. ಕೈಯಲ್ಲಿ ಗ್ಲೌಸ್ ಹಿಡಿದು ಅಭಿಮಾನಿಗಳತ್ತ ಕೈಬೀಸಿದರು. ಕೊನೆಯ ಸಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದ ಡಿಕೆ ಹಿಂದೆ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರು ಚಪ್ಪಾಳೆ ತಟ್ಟುತ್ತಾ ನಡೆದರು.
17 ವರ್ಷಗಳ ಸುದೀರ್ಘ ಐಪಿಎಲ್ ವೃತ್ತಿಜೀವನದಲ್ಲಿ ದಿನೇಶ್ ಕಾರ್ತಿಕ್ ಅವರು ಆಡಿರುವ 257 ಪಂದ್ಯಗಳಲ್ಲಿ 22 ಅರ್ಧಶತಕಗಳೊಂದಿಗೆ 4,842 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಆರು ಫ್ರಾಂಚೈಸಿಗಳಿಗೆ ಆಡಿದ್ದಾರೆ.
ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ನೊಂದಿಗೆ 2008 ರಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ನಂತರ 2011ರಲ್ಲಿ ಪಂಜಾಬ್ ತಂಡಕ್ಕೆ ಸೇರಿದರು ಮತ್ತು ನಂತರ ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಈಗ ಆರ್‌ಸಿಬಿಯ ಭಾಗವಾಗಿದ್ದರು. ಐಪಿಎಲ್ 2024 ಆವೃತ್ತಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ 187.36 ಸ್ಟ್ರೈಕ್ ರೇಟ್‌ನೊಂದಿಗೆ 326 ರನ್ ಗಳಿಸಿದ್ದಾರೆ.
Advertisement