
ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಂಕಷ್ಟಗಳು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ನೇಮಕಗೊಂಡ ನಂತರದಿಂದಲೂ ಪಾಂಡ್ಯ ಅಭಿಮಾನಿಗಳಿಂದ ತೀವ್ರ ನಿಂದನೆಗೆ ಗುರಿಯಾಗಿದ್ದರು. ಅಲ್ಲದೆ, ಐಪಿಎಲ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಷ್ಟೇನು ಉತ್ತಮ ಪ್ರದರ್ಶನ ನೀಡದಿದ್ದರಿಂದಲೂ ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ನತಾಶಾ ಸ್ಟಾಂಕೋವಿಕ್ ಮತ್ತು ಪಾಂಡ್ಯ ಅವರ ವಿಚ್ಛೇದನದ ಸುದ್ದಿಗಳು ಹರಿದಾಡುತ್ತಿವೆ.
ಇದೀಗ T20 ವಿಶ್ವಕಪ್ 2024 ತಂಡಕ್ಕೆ ಆಯ್ಕೆಯಾಗಿರುವ ಅನುಭವಿ ಕ್ರಿಕೆಟಿಗರು ತಯಾರಿ ನಡೆಸುತ್ತಿದ್ದು, ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಹೊರಡಲು ಸಿದ್ಧವಾಗಿರುವ ಮೊದಲ ಬ್ಯಾಚ್ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿಲ್ಲ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಕ್ರಿಕೆಟಿಗರು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ಗೆ ಹಾರಲು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ರೋಹಿತ್ ಶರ್ಮಾ, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ರಿಷಬ್ ಪಂತ್ ಇದ್ದರು. ಈ ಪೈಕಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿಲ್ಲ.
ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ಹಾರ್ದಿಕ್ ಪಾಂಡ್ಯ ಅವರ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರಾದ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಜೊತೆಗೆ ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಸಹ ಕಾಣಬಹುದು.
ಐಪಿಎಲ್ 2024 ನೇ ಆವೃತ್ತಿಯಿಂದ ಹೊರಗುಳಿದಿರುವ ತಂಡಗಳಲ್ಲಿದ್ದ ಮೊದಲ ಬ್ಯಾಚ್ ಆಟಗಾರರನ್ನು ಶನಿವಾರದಂದು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ ಮತ್ತು ಇತರರು ಐಪಿಎಲ್ ಫೈನಲ್ ಪಂದ್ಯದ ನಂತರ ಹೊರಡಲು ಮುಂದಾಗಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದ ಹಾರ್ದಿಕ್ ಕೂಡ ಮೊದಲ ಬ್ಯಾಚ್‌ನ ಆಟಗಾರರ ಭಾಗವಾಗಬೇಕಿತ್ತು. ಆದರೆ, ಅವರು ಕಾಣಿಸಿಕೊಂಡಿಲ್ಲ.
ಟೀಂ ಇಂಡಿಯಾದ ಮೊದಲ ಬ್ಯಾಚ್ ನಿರ್ಗಮನದಿಂದ ಹಾರ್ದಿಕ್ ಅವರ ಅನುಪಸ್ಥಿತಿಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೂ ಏನಾದರೂ ಸಂಬಂಧವಿದೆಯೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ದಾಂಪತ್ಯದಲ್ಲಿ ಬಿರುಕು
ದಂಪತಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳು ಹಬ್ಬಿದ್ದು, ನತಾಶಾ ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಿಂದ 'ಪಾಂಡ್ಯ' ಎಂಬ ಉಪನಾಮವನ್ನು ತೆಗೆದುಹಾಕಿದ್ದಾರೆ. ಐಪಿಎಲ್ 2024 ಪಂದ್ಯಗಳಿಂದಲೂ ನತಾಶಾ ಅವರು ದೂರ ಉಳಿದಿದ್ದು, ಇತ್ತೀಚೆಗೆ ಹಾರ್ದಿಕ್ ಅವರೊಂದಿಗೆ ಯಾವುದೇ ಚಿತ್ರವನ್ನು ಪೋಸ್ಟ್ ಮಾಡದಿರುವುದು ವದಂತಿಗಳಿಗೆ ಎಡೆಮಾಡಿಕೊಟ್ಟಿದೆ.
ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಹರಡುತ್ತಿದ್ದು, ಹಾರ್ದಿಕ್ ಅಥವಾ ನತಾಶಾ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
Advertisement