
ಐಪಿಎಲ್ 2024ನೇ ಆವೃತ್ತಿಯ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಸೆಣೆಸಲು ಸಜ್ಜಾಗಿದೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲಲು ಎರಡೂ ತಂಡಗಳು ಹೋರಾಟ ನಡೆಸಲಿವೆ.
ಲೀಗ್ ಮತ್ತು ಪ್ಲೇಆಫ್ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್‌ನಲ್ಲಿ ಕೂಡ ಗೆದ್ದು ಮೂರನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ನಾಯಕನಾಗಿ ಕೆಕೆಆರ್ ತಂಡವನ್ನು ಎರಡು ಬಾರಿ ಚಾಂಪಿಯನ್ ಮಾಡಿರುವ ಗೌತಮ್ ಗಂಭೀರ್ ಈಗ ಮೆಂಟರ್ ಆಗಿ ತಂಡಕ್ಕೆ ಮತ್ತೊಂದು ಪ್ರಶಸ್ತಿ ಗೆಲ್ಲಿಸಿಕೊಡಲು ಸಜ್ಜಾಗಿದ್ದಾರೆ. ಆದರೆ ವಿಶ್ವಕಪ್, ಟೆಸ್ಟ್ ಚಾಂಪಿಯನ್‌ಶಿಪ್‌ಗಳನ್ನು ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಿಸಿಕೊಟ್ಟಿರುವ ಪ್ಯಾಟ್ ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಮಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾಯುತ್ತಿದ್ದಾರೆ.
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ?
ವೆದರ್ ಡಾಟ್ ಕಾಮ್ ಪ್ರಕಾರ, ಚೆಪಾಕ್‌ನಲ್ಲಿ ಹಗಲಿನಲ್ಲಿ ಸುಮಾರು 47% ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಸಂಜೆಯೊಳಗೆ ಈ ಸಾಧ್ಯತೆ ಸುಮಾರು 32% ಕ್ಕೆ ಇಳಿಯುತ್ತವೆ. ಒಂದು ವೇಳೆ ರೆಮಲ್ ಚಂಡಮಾರುತದ ಪ್ರಭಾವದಿಂದ ಮಳೆ ಹೆಚ್ಚಾದರೆ ಪಂದ್ಯ ನಡೆಯುವುದೇ ಅನುಮಾನವಾಗುತ್ತದೆ.
ಈಗಾಗಲೇ ಐಪಿಎಲ್‌ನಲ್ಲಿ ಹಲವು ಪಂದ್ಯಗಳು ಮಳೆಯಿಂದ ರದ್ದಾಗಿರುವುದನ್ನು ನೋಡಿದ್ದೇವೆ. ಭಾರಿ ಮಳೆಯಿಂದ ಭಾನುವಾರ ನಡೆಯಲಿರುವ ಪಂದ್ಯ ರದ್ದಾದರೆ ಸೋಮವಾರ ಮೀಸಲು ದಿನದಂದು ಪಂದ್ಯ ನಡೆಯಲಿದೆ. ಮೀಸಲು ದಿನ ಸಂಪೂರ್ಣ 20 ಓವರ್ ಪಂದ್ಯವನ್ನು ನಡೆಸಲಾಗುತ್ತದೆ. ಮೀಸಲು ದಿನ ಕೂಡ ಮಳೆ ಬಂದರೆ, 5 ಓವರ್ ಪಂದ್ಯ ನಡೆದರೂ ಸಾಕು, ಡಕ್ವರ್ತ್ ಲೂಯಿಸ್ ನಿಯಮದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಆದರೆ, ಮೀಸಲು ದಿನ ಕೂಡ ಮಳೆಯಿಂದ ಪಂದ್ಯ ರದ್ದಾದರೆ, ಐಪಿಎಲ್‌ನಲ್ಲಿ ಹಿಂದೆಂದೂ ನಡೆದಿಲ್ಲದ ಸನ್ನಿವೇಶ ಸೃಷ್ಟಿಯಾಗಲಿದ್ದು, ಪಾಯಿಂಟ್ಸ್ ಟೇಬಲ್ ಶ್ರೇಯಾಂಕಗಳು ಕಾರ್ಯರೂಪಕ್ಕೆ ಬರುತ್ತವೆ. ಅಂತಹ ಸಂದರ್ಭದಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಟ್ರೋಫಿಯನ್ನು ಎತ್ತುತ್ತಾರೆ, ಸನ್‌ರೈಸರ್ಸ್ ಹೈದರಾಬಾದ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ.
Advertisement