2023ರ ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ.
ದಂಪತಿಗಳು ಹೃತ್ಪೂರ್ವಕ ಸಂದೇಶದೊಂದಿಗೆ Instagram ನಲ್ಲಿ ಜಂಟಿ ಪ್ರಕಟಣೆಯನ್ನು ಪೋಸ್ಟ್ ಮಾಡಿದ್ದಾರೆ. 2025ಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಅಥಿಯಾ ಮತ್ತು ಕೆಎಲ್ ರಾಹುಲ್ ನಡುವಿನ ಪ್ರೇಮಕಥೆಯು ಫೆಬ್ರವರಿ 2019ರಲ್ಲಿ ಪ್ರಾರಂಭವಾಯಿತು.
ಮೊದಲಿಗೆ ಸ್ನೇಹಿತರಾಗಿದ್ದ ಅವರು ನಂತರ ಪ್ರೀತಿಯಲ್ಲಿ ಬಿದ್ದಿದ್ದರು. 2020ರಲ್ಲಿ ಅಥಿಯಾ ಮತ್ತು ರಾಹುಲ್ ತಮ್ಮ ಹೊಸ ವರ್ಷದ ಥೈಲ್ಯಾಂಡ್ ಪ್ರವಾಸದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ಒಪ್ಪಿಕೊಂಡರು. ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರರ ಜೀವನಕ್ಕೆ ಸಂಬಂಧಿಸಿದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು.
ಅಥಿಯಾ ತಂದೆ ಸುನೀಲ್ ಶೆಟ್ಟಿ ಸದಾ ಕೆಎಲ್ ರಾಹುಲ್ ರನ್ನು ಬೆಂಬಲಿಸುತ್ತಿದ್ದರು. ಈ ವರ್ಷಾರಂಭದಲ್ಲಿ ತಾತನಾಗಲು ಸಿದ್ಧ ಎಂಬ ಸೂಚನೆಯನ್ನೂ ನೀಡಿದ್ದು, ಇದೀಗ ಅವರ ಆಸೆ ಈಡೇರುತ್ತಿದೆ.
Advertisement