ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಈ ಪ್ರದರ್ಶನದ ಮೂಲಕ ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಅಪರೂಪದ ದಾಖಲೆಯೊಂದನ್ನು ಮುರಿದು ಹಾಕಿದೆ.
ಹೌದು.. ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ವೇಳೆ ಭಾರತ ತಂಡ ಭರ್ಜರಿ ಆರಂಭ ಪಡೆದಿದ್ದು, 2ನೇ ದಿನದಾಟದ ಅಂತ್ಯಕ್ಕೆ 57 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 172 ರನ್ ಕಲೆಹಾಕಿದೆ. ಆ ಮೂಲಕ ಭಾರತ ತಂಡ ಒಟ್ಟಾರೆ 218 ರನ್ ಗಳ ಮುನ್ನಡೆ ಸಾಧಿಸಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 193 ಎಸೆತಗಳಲ್ಲಿ 2 ಸಿಕ್ಸರ್ 7 ಬೌಂಡರಿ ಸಹಿತ ಅಜೇಯ 90 ರನ್ ಕಲೆಹಾಕಿದ್ದು, ಅವರಿಗೆ ಉತ್ತಮ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 153 ಎಸೆತಗಳಲ್ಲಿ 4 ಬೌಂಡರಿ ಸಹಿತ 62 ಕಲೆಹಾಕಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ದಾಂಡಿಗರ 14 ವರ್ಷಗಳ ದಾಖಲೆ ಪತನ
ಇಂದಿನ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತದ ಆರಂಭಿಕ ಜೋಡಿ 2000ದಿಂದೀಚೆಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಓವರ್ ಆಡಿದ 2ನೇ ವಿದೇಶಿ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.
ಈ ಹಿಂದೆ 2001ರಲ್ಲಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆರಂಭಿಕರಾದ ಶೆರ್ವಿನ್ ಕ್ಯಾಂಪ್ಬೆಲ್ ಮತ್ತು ವೇವೆಲ್ ಹಿಂಡ್ಸ್ ಜೋಡಿ 53.3 ಓವರ್ ಆಡಿತ್ತು. ಬಳಿಕ 2010ರಲ್ಲಿ ಇಂಗ್ಲೆಂಡ್ ತಂಡದ ಆಂಡ್ರ್ಯೂ ಸ್ಟ್ರಾಸ್ ಮತ್ತು ಅಲೆಸ್ಟರ್ ಕುಕ್ ಜೋಡಿ ಮೆಲ್ಬೋರ್ನ್ ನಲ್ಲಿ 51.1 ಓವರ್ ಆಡಿತ್ತು.
ಇದೀಗ ಭಾರತದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ 57 ಓವರ್ ಆಡುವ ಮೂಲಕ ಈ ದಾಖಲೆಗಳನ್ನು ಮುರಿದಿದೆ.
ಮತ್ತೊಂದು ದಾಖಲೆ ಮುರಿಯುವ ಸಾಧ್ಯತೆ
2000ದಿಂದೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ಓವರ್ ಆಡಿರುವ ಕೀರ್ತಿ ಮತ್ತದೇ ಇಂಗ್ಲೆಂಡ್ ತಂಡದ ಆಂಡ್ರ್ಯೂ ಸ್ಟ್ರಾಸ್ ಮತ್ತು ಅಲೆಸ್ಟರ್ ಕುಕ್ ಜೋಡಿ ಹೆಸರಲ್ಲಿದ್ದು 2010ರಲ್ಲಿ ಈ ಜೋಡಿ ಬ್ರಿಸ್ಬೇನ್ ನಲ್ಲಿ 66.2 ಓವರ್ ಆಡಿತ್ತು.
ಪ್ರಸ್ತುತ ಪರ್ತ್ ಟೆಸ್ಟ್ ನಲ್ಲಿ ಭಾರತದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ 57 ಓವರ್ ಆಡಿದ್ದು, ಇನ್ನು ಕೇವಲ 9.4 ಓವರ್ ಆಡಿದರೆ ಈ ದಾಖಲೆಯನ್ನೂ ಹಿಂದಿಕ್ಕಿ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಓವರ್ ಆಡಿದ ಮೊದಲ ವಿದೇಶಿ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
Visiting opening pairs surviving 50+ overs in Australia since 2000
53.3 Sherwin Campbell & Wavell Hinds Sydney 2001
66.2 Andrew Strauss & Alastair Cook Brisbane 2010
51.1 Andrew Strauss & Alastair Cook Melbourne 2010
50.0 Yashasvi Jaiswal & KL Rahul Perth 2024
Advertisement