
ದುಬೈ: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಶುಕ್ರವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮಹಿಳಾ ಟಿ 20 ವಿಶ್ವಕಪ್ (Women’s T20 World Cup) ಪಂದ್ಯದ ಸಂದರ್ಭದಲ್ಲಿ ಕಾಮೆಂಟರಿ ಮಾಡುವಾಗ, ಸಂಜಯ್ ಮಂಜ್ರೇಕರ್ ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚಿಂಗ್ ಘಟಕದ ಬಗ್ಗೆ ಮಂಜ್ರೇಕರ್ ಮಾತನಾಡುತ್ತಿದ್ದಾಗ ಉತ್ತರ ಭಾರತದ ಆಟಗಾರರ ಬಗ್ಗೆ ತನಗೆ ಆಳವಾದ ಜ್ಞಾನವಿಲ್ಲ ಎಂದು ಹೇಳಿದ್ದಾರೆ. ಸಹವರ್ತಿ ವೀಕ್ಷಕ ವಿವರಣೆಗಾರರು ಮಾಜಿ ಪಂಜಾಬ್ ಆಟಗಾರ ಮತ್ತು ತಂಡದ ಫೀಲ್ಡಿಂಗ್ ತರಬೇತುದಾರ ಮುನೀಶ್ ಬಾಲಿ ಅವರ ಬಗ್ಗೆ ಮಾತನಾಡಿದಾಗ ಮಾಂಜ್ರೇಕರ್ ಬಾಲಿ ಅವರ ಪರಿಚಯ ಇಲ್ಲ ಎಂದು ಹೇಳಿದ್ದಾರೆ.
“ಕ್ಷಮಿಸಿ, ನನಗೆ ಅವರ ಪರಿಚಯವಿಲ್ಲ. ಉತ್ತರ ಭಾರತದ ಆಟಗಾರರ ಬಗ್ಗೆ ನಾನು ಹೆಚ್ಚು ಗಮನ ಹರಿಸುವುದಿಲ್ಲ” ಎಂದು ನೇರ ಪ್ರಸಾರದಲ್ಲಿಯೇ ಮಂಜ್ರೇಕರ್ ಹೇಳಿದ್ದಾರೆ.
ಮಂಜ್ರೇಕರ್ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ಸಂಜಯ್ ಮಂಜ್ರೇಕರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇಂತಹ ಜನಾಂಗೀಯವಾದಿಯನ್ನು ಹೇಗೆ ಕಾಮೆಂಟರಿ ಪ್ಯಾನೆಲ್ ನಲ್ಲಿ ಕೂರಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಂಜ್ರೇಕರ್ ಈ ಹಿಂದೆಯೂ ಸಾಕಷ್ಟು ಸಂದರ್ಭಗಳಲ್ಲಿ ವಿವಾದಿತ ಹೇಳಿಕೆ ನೀಡಿ ಸುದ್ದಿಯಾಗಿದ್ದರು. 2019 ರ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸಹ-ವಿಶ್ಲೇಷಕ ಹರ್ಷಾ ಭೋಗ್ಲೆ ಅವರ ಬಗ್ಗೆ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದರು.
Advertisement