
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ICC T20 WorldCup 2024 Final ಪಂದ್ಯದ ನಿರ್ಣಾಯಕ ಘಟದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯದ ನಾಟಕವಾಡಿದ್ದರು ಎಂಬ ನಾಯಕ ರೋಹಿತ್ ಶರ್ಮಾ ಹೇಳಿಕೆಗೆ ಇದೇ ಮೊದಲ ಬಾರಿಗೆ ರಿಷಬ್ ಪಂತ್ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಫ್ರಿಕನ್ ಬ್ಯಾಟರ್ ಗಳು ಉತ್ತಮ ಲಯದಲ್ಲಿದ್ದರು. ಪಂದ್ಯ ಇನ್ನೇನು ಕೈ ಜಾರುತ್ತಿದೆ ಎನ್ನುತ್ತಿರುವಾಗ ನಾವೆಲ್ಲರೂ ಫೀಲ್ಡಿಂಗ್ ಸೆಟ್ ಮಾಡುವುದರಲ್ಲಿ ಬಿಸಿಯಾಗಿದ್ದೆವು.
ಆದರೆ ಈ ಹಂತದಲ್ಲಿ ಪಂತ್ ಕೆಳಗೆ ಕುಸಿದಿದ್ದರು. ಕಾಲಿನ ನೋವಿನ ನಾಟಕ ಮಾಡಿ ಕೆಳಗೆ ಬಿದ್ದಿದ್ದರು. ಫಿಸಿಯೋ ಚಿಕಿತ್ಸೆ ಮಾಡುತ್ತಿದ್ದರು. ಇದರಿಂದ ನಮಗೆ 3 ರಿಂದ 5 ನಿಮಿಷಗಳ ಸಮಯ ಸಿಕ್ಕಿತ್ತು. ಇದರಿಂದ ದಕ್ಷಿಣ ಆಫ್ರಿಕಾದ ಮೊಮೆಂಟಮ್ ಬದಲಾಗಿತ್ತು. ಇದರ ಲಾಭ ತಂಡಕ್ಕಾಯಿತು ಎಂದು ರೋಹಿತ್ ಶರ್ಮಾ ಹೇಳಿದರು.
ರೋಹಿತ್ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರಿಷಬ್ ಪಂತ್ ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆಯಾದರೂ ರಿಷಬ್ ಪಂತ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
'ನಾಟಕ ಮಾಡುತ್ತಿದ್ದೇನೆ ನಿಧಾನಕ್ಕೆ ಬ್ಯಾಂಡೇಜ್ ಕಟ್ಟು!'
ಇದೀಗ ಮೊದಲ ಬಾರಿಗೆ ರಿಷಬ್ ಪಂತ್ ಪ್ರತಿಕ್ರಿಯೆ ನೀಡಿದ್ದು, ಅಂದು ಆಫ್ರಿಕನ್ ಬ್ಯಾಟರ್ ಗಳು ಉತ್ತಮ ಲಯದಲ್ಲಿದ್ದರು. 2-3 ಓವರ್‌ಗಳಲ್ಲಿ ಸಾಕಷ್ಟು ರನ್‌ಗಳು ಬಂದಿದ್ದವು. ಹೀಗಾಗಿ ಮೊಮೆಂಟಮ್ ಬದಲಿಸಬೇಕಿತ್ತು. ಅವರ ಗಮನ ಬೇರೆಡೆ ಸೆಳೆಯಬೇಕಿತ್ತು. ಹೀಗಾಗಿ ನಾನು ಗಾಯದ ನಾಟಕ ಮಾಡಬೇಕಾಯಿತು. ರೋಹಿತ್ ಶರ್ಮಾ ಫೀಲ್ಡಿಂಗ್ ಸೆಟಪ್ ಮಾಡುತ್ತಿದ್ದಾಗ ನಾನು ಕಾಲಿನ ನೋವಿನಿಂದ ಕುಸಿದೆ. ಈ ವೇಳೆ ಫಿಸಿಯೋ ಬಂದು ಚಿಕಿತ್ಸೆ ಮಾಡುತ್ತಿದ್ದರು.
ಈ ವೇಳೆ ಅವರು ನನ್ನನ್ನು ಕೇಳಿದರು. ನೀವು ಆರಾಮಾಗಿದ್ದೀರಾ ಎಂದು.. ಆಗ ನಾನು ಇಲ್ಲ ನಾನು ನಾಟಕ ಮಾಡುತ್ತಿದ್ದೇನೆ. ನೀನು ನಿಧಾನಕ್ಕೆ ಬ್ಯಾಂಡೇಜ್ ಕಟ್ಟು ಎಂದು ಹೇಳಿದ್ದೆ. ಕೆಲವೊಮ್ಮೆ ಅಂತಹ ಪಂದ್ಯದ ಪರಿಸ್ಥಿತಿಯಲ್ಲಿ, ಇದು ಪ್ರತಿ ಬಾರಿಯೂ ಕೆಲಸ ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ, ಆದರೆ ಕೆಲವೊಮ್ಮೆ ಅದು ಕೆಲಸ ಮಾಡುತ್ತದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
Advertisement