
ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಯಶಸ್ವಿ ಸರಣಿ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಸಿದ್ಧವಾಗುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಮಳೆ ಭೀತಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ವರುಣದೇವ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಅಂದರೆ ಅಕ್ಟೋಬರ್ 16ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಈಗಾಗಲೇ ಕಳೆದ ರಾತ್ರಿಯಿಂದ ಬೆಂಗಳೂರಿನಲ್ಲಿ ಎಡೆಬೆಡದೆ ಮಳೆಸುರಿಯುತ್ತಿದ್ದು, ಸದ್ಯಕ್ಕಂತು ವರುಣ ದೇವ ಬಿಡುವು ನೀಡುವ ಯಾವುದೇ ಮುನ್ಸೂಚಣೆ ಕಾಣುತ್ತಿಲ್ಲ. ಹೀಗಾಗಿ ಬೆಂಗಳೂರು ಪಂದ್ಯದ ಮೇಲೆ ವರುಣ ಭೀತಿ ಆರಂಭವಾಗಿದೆ.
ಪಂದ್ಯ ನಡೆಯುವ ಐದೂ ದಿನ ಮಳೆ
ಇನ್ನು ಪಂದ್ಯ ನಡೆಯುವ ಅಕ್ಟೋಬರ್ 15ರಿಂದ ಅಕ್ಟೋಬರ್ 20ವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಐದೂ ದಿನಗಳ ಕಾಲ ಕ್ರಿಕೆಟ್ ಆಟಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆ ಇದೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಮೇಲೆ ಪರಿಣಾಮ
ಇನ್ನು ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳಿಗೂ ಬೆಂಗಳೂರು ಟೆಸ್ಟ್ ಅತ್ಯಂತ ಪ್ರಮುಖಪಂದ್ಯವಾಗಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಉಭಯ ತಂಡಗಳೂ ಫೈನಲ್ ಗೇರಲು ಪೈಪೋಟಿ ನಡೆಸುತ್ತಿವೆ. ಈ ಹಂತದಲ್ಲಿ ಉಭಯ ತಂಡಗಳು ಎದುರಾಗುತ್ತಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಹೆಚ್ಚಿನ ಅಂಕಗಳಿಸಲು ಉಭಯ ತಂಡಗಳೂ ಹವಣಿಸುತ್ತಿವೆ.
ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ತನ್ನ ತೆಕ್ಕೆಗೆ ಮತ್ತಷ್ಟು ಅಂಕಗಳನ್ನು ಸೇರಿಸಿ ಫೈನಲ್ ಹಂತಕ್ಕೇರಲು ಹವಣಿಸುತ್ತಿದೆ. ಅಂತೆಯೇ ಶ್ರೀಲಂಕಾ ವಿರುದ್ಧದ ಸೋಲಿನ ನಿರಾಸೆಯ ಹಿನ್ನೆಲೆಯಲ್ಲಿರುವ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಭರ್ಜರಿ ಕಮ್ ಬ್ಯಾಕ್ ಮಾಡುವ ಹುಮ್ಮಸ್ಸಿನೊಂದಿಗೆ ಬೆಂಗಳೂರಿಗೆ ಆಗಮಿಸಿದೆ.
ಮಳೆಗೆ ಸೆಡ್ಡು ಹೊಡೆಯುತ್ತದೆಯೇ ಚಿನ್ನಸ್ವಾಮಿ
ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆಯು ಅತ್ಯುತ್ತಮವಾಗಿದ್ದು, ಮಳೆನಿಂತ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣವನ್ನು ಮತ್ತೆ ಆಟಕ್ಕೆ ಸಿದ್ಧ ಮಾಡುವ ಸಾಮರ್ಥ್ಯ ಚಿನ್ನಸ್ವಾಮಿಗಿದೆ. ಆದಾಗ್ಯೂ ನಿರಂತರ ಮಳೆ ಆಟಕ್ಕೆ ಅಡ್ಡಿಪಡಿಸಬಹುದು. ಅದಾಗ್ಯೂ ಸರಣಿಯ ಆರಂಭಿಕ ಪಂದ್ಯದ ಫಲಿತಾಂಶವನ್ನು ಪಡೆಯಲು ಭಾರತ ಮತ್ತು ನ್ಯೂಜಿಲೆಂಡ್‌ಗೆ ವರುಣ್ ದೇವಲ ಕೃಪೆ ಅವಶ್ಯಕವಾಗಿ ಬೇಕಿದೆ.
Advertisement