ಕಾನ್ಪುರ್: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಅಬ್ಬರ ಪ್ರದರ್ಶನ ನೀಡುತ್ತಿದ್ದು ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯದಂತೆ ಆಡುತ್ತಿದ್ದಾರೆ. ಹೌದು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 74 ಓವರ್ ಗಳಲ್ಲಿ 233 ರನ್ ಗೆ ಆಲೌಟ್ ಆಯಿತು.
ನಂತರ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಹೌದು 30 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿದೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ಬರೆದಿದೆ. 24.2 ಓವರ್ ಗಳಲ್ಲಿ ಭಾರತ 200 ರನ್ ಪೇರಿಸಿದೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ರನ್ ದಾಖಲೆಯಾಗಿದೆ. ಇನ್ನು ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 28.1 ಓವರ್ ನಲ್ಲಿ 200 ರನ್ ಪೇರಿಸಿತ್ತು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 29.4 ಓವರ್ ಗಳಲ್ಲಿ 200 ರನ್ ಪೇರಿಸಿ ಮೂರನೇ ಸ್ಥಾನದಲ್ಲಿದೆ.
ಭಾರತ ಪರ ಯಶಸ್ವಿ ಜೈಸ್ವಾಲ್ 51 ಎಸೆತಗಳಲ್ಲಿ 72 ರನ್ ಸಿಡಿಸಿದರೆ, ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಬಾರಿಸಿ ಔಟಾದರು. ನಂತರ ಬಂದ ಶುಭ್ಮನ್ ಗಿಲ್ 36 ಎಸೆತಗಳಲ್ಲಿ 39 ರನ್ ಪೇರಿಸಿದರೆ, ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 47 ರನ್ ಗೆ ಔಟಾಗಿದ್ದು ಅರ್ಧಶತಕ ವಂಚಿತರಾದರು. ಇನ್ನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಕೆಎಲ್ ರಾಹುಲ್ 38 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸೇರಿದಂತೆ 65 ರನ್ ಬಾರಿಸಿದ್ದಾರೆ.
ಬಾಂಗ್ಲಾ ಪರ ಬೌಲಿಂಗ್ ನಲ್ಲಿ ಶಕೀಬ್ ಅಲ್ ಹಸನ್ 3 ವಿಕೆಟ್ ಪಡೆದರೆ, ಹಸನ್ ಮಿರಾಜ್ ಮತ್ತು ಹಸನ್ ಮಹ್ಮುದ್ ತಲಾ 1 ವಿಕೆಟ್ ಪಡೆದಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಮಳೆಯಿಂದಾಗಿ ಎರಡು ಹಾಗೂ ಮೂರನೇ ದಿನ ಪಂದ್ಯಗಳು ರದ್ದಾಗಿತ್ತು. ಇಂದು ನಾಲ್ಕನೇ ದಿನದ ಆಟ ಮುಂದುವರೆದಿದ್ದು ಟೀಂ ಇಂಡಿಯಾ ಬ್ಯಾಟರ್ ಗಳು ಬಾಂಗ್ಲಾ ಬೌಲರ್ ಗಳನ್ನು ದಂಡಿಸುತ್ತಿದ್ದಾರೆ.
Advertisement