
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕುತೂಹಲಕಾರಿ ಘಟ್ಟದತ್ತ ಸಾಗಿರುವಂತೆಯೇ ಆಟಗಾರರ ನಡುವಿನ ಅಗ್ರೆಷನ್ ಕೂಡ ಮಿತಿ ಮೀರುತ್ತಿದೆ.
ಇಂತಹುದೇ ಒಂದು ಘಟನೆ ಇದೀಗ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲೂ ಆಗಿದ್ದು, ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ವಿವಾದಾತ್ಮಕ ಸಂಭ್ರಮಾಚರಣೆ ಮಾಡಿ ಇದೀಗ ದಂಡನೆಗೆ ಗುರಿಯಾಗಿದ್ದಾರೆ.
ಮಂಗಳವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಎಲ್‌ಎಸ್‌ಜಿ ಪಂದ್ಯದ ಸಂದರ್ಭದಲ್ಲಿ "ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ" ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಥಿಗೆ ದಂಡ ವಿಧಿಸಿತು.
ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ಲಕ್ನೋ ಸೂಪರ್ ಜೈಂಟ್ಸ್‌ನ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ಅವರು ವಿವಾದಿತ ನೋಟ್ ಬುಕ್ ಸೆಲೆಬ್ರೇಷನ್ ಮಾಡಿ ಬ್ಯಾಟರ್ ಗೆ ಮುಜುಗರವಾಗುವ ರೀತಿ ನಡೆದುಕೊಂಡಿದ್ದರು.
ಹೀಗಾಗಿ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ಅವರಿಗೆ ಬಿಸಿಸಿಐ ದಂಡ ಹೇರಿದೆ. ರಥಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
"ದಿಗ್ವೇಶ್ ಸಿಂಗ್ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದು ಮತ್ತು ಮ್ಯಾಚ್ ರೆಫರಿಯ ಅನುಮತಿಯನ್ನು ಸ್ವೀಕರಿಸಿದರು" ಎಂದು ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ತಿಳಿಸಿದೆ. "ಲೆವೆಲ್ 1 ನೀತಿ ಸಂಹಿತೆಯ ಉಲ್ಲಂಘನೆಗಾಗಿ, ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ."
ಏನಿದು ಪ್ರಕರಣ?
ಪಂಜಾಬ್ ಕಿಂಗ್ಸ್ 172 ರನ್‌ಗಳ ಚೇಸಿಂಗ್ ಸಮಯದಲ್ಲಿ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಈ ವಿವಾದಾತ್ಮಕ ಆಚರಣೆ ನಡೆಯಿತು. ದಿಗ್ವೇಶ್ ಶಾರ್ಟ್ ಮತ್ತು ವೈಡ್ ಎಸೆತವನ್ನು ಎಸೆದರು. ಆ ಚೆಂಡನ್ನು ಆರ್ಯನ್ ಬಾರಿಸಲು ಯತ್ನಿಸಿದರು. ಈ ವೇಳೆ ಚೆಂಡನ್ನು ಮಿಡ್-ಆನ್ ನಿಂದ ವೇಗವಾಗಿ ಬಂದ ಶಾರ್ದೂಲ್ ಠಾಕೂರ್ ರನ್ನಿಂಗ್ ಕ್ಯಾಚ್ ಪಡೆದರು. ಆರ್ಯ ಒಂಬತ್ತು ಎಸೆತಗಳಲ್ಲಿ ಎಂಟು ರನ್ ಗಳಿಸಿ ಪೆವಿಲಿಯನ್‌ಗೆ ಹಿಂತಿರುಗುತ್ತಿರುವಾಗ ದಿಗ್ವೇಶ್ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದರು. ಅವರ ಈ ವರ್ತನೆಯನ್ನು ಅಂಪೈರ್ ಗಳು ಗಮನಿಸಿ ಮ್ಯಾಚ್ ರೆಫರಿಗೆ ವರದಿ ನೀಡಿದ್ದರು. ಇದೀಗ ಬಿಸಿಸಿಐ ಕ್ರಮ ಕೈಗೊಂಡಿದೆ.
ನೋಟ್ ಬುಕ್ ಸೆಲೆಬ್ರೇಷನ್ ಇದೇ ಮೊದಲೇನಲ್ಲ..
ಇನ್ನು ಈ ವಿವಾದಿತ ನೋಟ್ ಬುಕ್ ಸೆಲೆಬ್ರೇಷನ್ ಇದೇ ಮೊದಲೇನಲ್ಲ.. ಈ ಹಿಂದೆ 2019ರಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಸರಣಿಯಲ್ಲೂ ಈ ನೋಟ್ ಬುಕ್ ಸೆಲೆಬ್ರೇಷನ್ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಭಾರತದ ವಿರಾಟ್ ಕೊಹ್ಲಿಯನ್ನು ಕೆಣಕ್ಕಿದ್ದ ವಿಂಡೀಸ್ ನ ಕೆಸ್ರಿಕ್ ವಿಲಿಯಮ್ಸ್ ಕೊಹ್ಲಿಯನ್ನು ಔಟ್ ಮಾಡಿ ಇದೇ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದರು. ಆದರೆ ಇದರಿಂದ ಸಿಟ್ಟೆಗೆದ್ದಿದ್ದ ಕೊಹ್ಲಿ ನಂತರದ ಪಂದ್ಯದಲ್ಲಿ ಇದೇ ಕೆಸ್ರಿಕ್ ವಿಲಿಯಮ್ಸ್ ಗೆ ಸ್ಫೋಟಕ ಬ್ಯಾಟಿಂಗ್ ಮಾಡಿ ಪ್ರತೀ ಸಿಕ್ಸರ್ ಬೌಂಡರಿ ಹೊಡೆದಾಗಲೂ ಈ ನೋಟ್ ಬುಕ್ ಸೆಲೆಬ್ರೇಷನ್ ಮಾಡಿ ತಿರುಗೇಟು ನೀಡಿದ್ದರು.
Advertisement