
ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ರಿಷಭ್ ಪಂತ್ ಅವರನ್ನು ಐಪಿಎಲ್ ಇತಿಹಾಸದಲ್ಲೇ ದಾಖಲೆಯ 27 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ತಾವು ಆಡಿರುವ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಇದು ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ರಿಷಭ್ ಪಂತ್ ಪಡೆಗೆ ತವರಿನಲ್ಲೇ ಮುಖಭಂಗವಾಗಿದೆ. ಉತ್ತಮ ಪ್ರದರ್ಶನ ನೀಡಿದ ಪಂತ್ ಅವರ ನಾಯಕತ್ವದ ನಿರ್ಧಾರಗಳನ್ನು ಸಹ ಅನೇಕರು ಪ್ರಶ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು '27 ಕೋಟಿ ರೂಪಾಯಿ ವೈಫಲ್ಯ' ಎಂದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ LSG ತಂಡವು ಈ ಆವೃತ್ತಿಯಲ್ಲಿ ಎರಡನೇ ಬಾರಿ ಸೋಲು ಕಂಡಿದ್ದು, ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಅವರೊಂದಿಗೆ ತೀವ್ರ ಚರ್ಚೆ ನಡೆಸಿದ್ದಾರೆ.
ಹಿಂದೆ ಕನ್ನಡಿಗ ಕೆಎಲ್ ರಾಹುಲ್ LSG ತಂಡದ ನಾಯಕರಾಗಿದ್ದಾಗಲೂ ತಂಡದ ಸೋಲಿನಿಂದ ಕೋಪಗೊಂಡಿದ್ದ ಗೋಯೆಂಕಾ ಮೈದಾನದಲ್ಲಿಯೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಐಪಿಎಲ್ 2025ನೇ ಆವೃತ್ತಿಯಲ್ಲಿ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲ್‌ಎಸ್‌ಜಿ ವಿರುದ್ಧದ ಸೋಲಿನ ನಂತರ ಪಂತ್ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಕೆಎಲ್ ರಾಹುಲ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.
ಲಕ್ನೋ ತಂಡ ಈ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನಾಡಿದೆ. ಈ ಪೈಕಿ ಎರಡರಲ್ಲಿ ಸೋಲು ಕಂಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿದೆ. ಮೈದಾನದಲ್ಲಿಯೇ ಗೋಯೆಂಕಾ ಪಂತ್ ಜೊತೆ ಮಾತುಕತೆಯಲ್ಲಿ ತೊಡಗಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಸಂಭಾಷಣೆಯ ಸಮಯದಲ್ಲಿ ಎಲ್‌ಎಸ್‌ಜಿ ಮಾಲೀಕರು ಪಂತ್ ಕಡೆಗೆ ಬೆರಳು ತೋರಿಸುತ್ತಿರುವುದು ಕಂಡುಬಂದಿದೆ.
ಪಂದ್ಯದ ನಂತರ, ರಿಷಭ್ ಪಂತ್ ತಮ್ಮ ತಂಡ ಪಂಜಾಬ್ ವಿರುದ್ಧ ಸುಮಾರು 20-25 ರನ್‌ಗಳ ಕೊರತೆಯನ್ನು ಹೊಂದಿತ್ತು ಎಂದು ಒಪ್ಪಿಕೊಂಡಿದ್ದಾರೆ.
'ಈ ಮೊತ್ತ ಸಾಕಾಗಲಿಲ್ಲ, ನಮಗೆ 20-25 ರನ್‌ಗಳ ಕೊರತೆ ಇತ್ತು. ಆದರೆ, ಇದು ಆಟದ ಒಂದು ಭಾಗ. ನಮ್ಮ ತವರು ಮೈದಾನದಲ್ಲಿನ ಪರಿಸ್ಥಿತಿ ಕುರಿತು ಇನ್ನೂ ಅವಲೋಕಿಸಲಾಗುತ್ತಿದೆ. ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಾಗ ದೊಡ್ಡ ಮೊತ್ತವನ್ನು ಗಳಿಸುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ, ಪ್ರತಿಯೊಬ್ಬ ಆಟಗಾರನು ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುತ್ತಾನೆ. ನಾವು ಈ ಆಟದಿಂದ ಕಲಿಯಬೇಕು ಮತ್ತು ಮುಂದುವರಿಯಬೇಕು. ಬಹಳಷ್ಟು ಸಕಾರಾತ್ಮಕ ಅಂಶಗಳಿವೆ, ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ' ಎಂದು ಅವರು ಪಂದ್ಯದ ನಂತರ ಹೇಳಿದರು.
Advertisement