
ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಶ್ರೇಯಸ್ ಅವರ ಅರ್ಧಶತಕವನ್ನು ಆಚರಿಸಿರುವ ಪಂಜಾಬ್ ತಂಡ ಸಾಮಾಜಿಕ ಮಾಧ್ಯಮದಲ್ಲಿ LSG ನಾಯಕ ರಿಷಭ್ ಪಂತ್ ಅವರನ್ನು ಟೀಕಿಸಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ LSG ತಂಡಕ್ಕೆ ಬಿಕರಿಯಾದ ನಂತರ ಪಂತ್, ಪಂಜಾಬ್ ಕಿಂಗ್ಸ್ ತಂಡ ತಮ್ಮನ್ನು ಖರೀದಿಸದಿದ್ದಕ್ಕಾಗಿ ಸಮಾಧಾನ ವ್ಯಕ್ತಪಡಿಸಿದ್ದರು. ಈಗ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪಂಜಾಬ್, ಪಂತ್ ಅವರನ್ನು ಟೀಕಿಸಿದೆ. ಹರಾಜಿನಲ್ಲಿಯೇ ನಮ್ಮ ಎಲ್ಲ ಚಿಂತೆಗಳು ಮುಗಿದಿವೆ ಎಂದು ತಿರುಗೇಟು ನೀಡಿದೆ.
'ಮೇರಾ ಏಕ್ ಹಿ ಟೆನ್ಷನ್ ಥಾ, ವೋ ಥಾ ಪಂಜಾಬ್ (ನನಗೆ ಒಂದೇ ಒಂದು ಟೆನ್ಷನ್ ಇತ್ತು, ಅದು ಪಂಜಾಬ್ ನನ್ನನ್ನು ಆರಿಸಿಕೊಂಡರೆ)' ಎಂದು ರಿಷಭ್ ಪಂತ್ ಎಲ್‌ಎಸ್‌ಜಿ ನಾಯಕನಾಗಿ ಆಯ್ಕೆಯಾದ ನಂತರ ಜಿಯೋಸ್ಟಾರ್‌ಗೆ ತಿಳಿಸಿದ್ದರು.
ಈಗ ಪಂಜಾಬ್ ಕಿಂಗ್ಸ್ ತಂಡವು ಪಂತ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದು, 'ಟೆನ್ಷನ್ ತೋ ಅಕ್ಷನ್ ಮೇ ಹಿ ಖತಮ್ ಹೋ ಗಯಿ ಥಿ (ಹರಾಜಿನಲ್ಲಿಯೇ ನಮ್ಮ ಟೆನ್ಶನ್ ಮುಗಿಯಿತು)!' ಎಂದು ಪಂಜಾಬ್ ಕಿಂಗ್ಸ್ ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದು, ಶ್ರೇಯಸ್ ಅಯ್ಯರ್ ಅವರ ವಿಡಿಯೋ ಹಂಚಿಕೊಂಡಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತು. ಎಲ್‌ಎಸ್‌ಜಿ ತಂಡವು ಪಂತ್ ಅವರನ್ನು 27 ಕೋಟಿ ರೂ. ನೀಡಿ ಖರೀದಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಂತ್ ಅತ್ಯಂತ ದುಬಾರಿ ಆಟಗಾರರಾದರು. ಶ್ರೇಯಸ್ ಎರಡನೇ ದುಬಾರಿ ಆಟಗಾರನಾಗಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಲಕ್ನೋ ವಿರುದ್ಧದ ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ.
ಪಂತ್ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದು, ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 0, 15 ಮತ್ತು 2 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಈಗಾಗಲೇ ಪಿಬಿಕೆಎಸ್ ಪರ ತಾವು ಆಡಿರುವ ಎರಡು ಪಂದ್ಯಗಳಲ್ಲಿ 149 ರನ್ ಗಳಿಸಿದ್ದಾರೆ.
Advertisement