
ಕಳೆದ ವರ್ಷ ಐಪಿಎಲ್‌ನಲ್ಲಿ ಗೆದ್ದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವೆಂಕಟೇಶ್ ಅಯ್ಯರ್ ಅವರನ್ನು ಬಿಡುಗಡೆ ಮಾಡಿತು. ಆದರೆ, ಅವರನ್ನು ಮರಳಿ ಪಡೆಯಲು ₹23.75 ಕೋಟಿ ಖರ್ಚು ಮಾಡಿತು. ರಿಷಭ್ ಪಂತ್ (₹27 ಕೋಟಿ) ಮತ್ತು ಶ್ರೇಯಸ್ ಅಯ್ಯರ್ (₹26.75 ಕೋಟಿ) ನಂತರ ಮೂರನೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ವೆಂಕಟೇಶ್ ಅಯ್ಯರ್ ಆಗಿದ್ದಾರೆ. 2021ರ ಮಧ್ಯದಲ್ಲಿ ಪದಾರ್ಪಣೆ ಮಾಡಿದಾಗಿನಿಂದ ವೆಂಕಟೇಶ್ ಕೆಕೆಆರ್ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. 2022ರಲ್ಲಿ ನಿರಾಶಾದಾಯಕ ಆವೃತ್ತಿಯನ್ನು ಹೊರತುಪಡಿಸಿ, ಎಡಗೈ ಬ್ಯಾಟ್ಸ್‌ಮನ್ ಪ್ರತಿ ವರ್ಷ 350ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ, ಹೆಚ್ಚಿನ ಬೆಲೆ ನೀಡಿ ಖರೀದಿಸಿದ್ದರಿಂದ ಈ ವರ್ಷ ಎಲ್ಲರ ಗಮನ ವೆಂಕಟೇಶ್ ಅಯ್ಯರ್ ಅವರ ಮೇಲಿತ್ತು. ಕೆಕೆಆರ್ ರಿಂಕು ಸಿಂಗ್, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಅವರನ್ನು ಮತ್ತೆ ತಂಡಕ್ಕೆ ಖರೀದಿಸಿತು. ಆದರೆ, ವೆಂಕಟೇಶ್ ಅಯ್ಯರ್ ಅವರ ಹರಾಜು ಮೊತ್ತ ಅವರೆಲ್ಲರನ್ನೂ ಮೀರಿಸಿತು.
ಐಪಿಎಲ್ 2025ನೇ ಆವೃತ್ತಿಯ ಮೊದಲ ಎರಡು ಪಂದ್ಯಗಳಲ್ಲಿ ವೆಂಕಟೇಶ್ ಅಯ್ಯರ್ ಕೇವಲ 9 ರನ್ ಗಳಿಸಿದರು. ಇದರಿಂದಾಗಿ ಎದುರಾದ ಟೀಕೆಗಳಿಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಕೆಕೆಆರ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿದ್ದರೂ, ತಂಡದಲ್ಲಿ ತಮ್ಮ ಪಾತ್ರ ಏನೆಂಬುದರ ಬಗ್ಗೆ ಅಯ್ಯರ್ ಸ್ಪಷ್ಟವಾಗಿದ್ದರು. ಕೆಕೆಆರ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎಂಬ ಕಾರಣಕ್ಕೆ, ಅವರು ಪ್ರತಿ ಪಂದ್ಯದಲ್ಲೂ ರನ್ ಗಳಿಸುವ ಒತ್ತಡದಲ್ಲಿದ್ದಾರೆ ಎಂದರ್ಥವಲ್ಲ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 60 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಹಾದಿಗೆ ಮರಳಿಸಲು ಸಹಾಯ ಮಾಡಿದ ವೆಂಕಟೇಶ್ ಅಯ್ಯರ್, ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಐಪಿಎಲ್ ಆರಂಭವಾದ ನಂತರ, ನಿಮ್ಮನ್ನು ₹20 ಲಕ್ಷಕ್ಕೆ ಅಥವಾ 20 ಕೋಟಿಗೆ ಖರೀದಿಸಲಾಗಿದೆಯೇ ಎಂಬುದು ಮುಖ್ಯವಲ್ಲ. ನೀವು ಹೇಗೆ ಕ್ರಿಕೆಟ್ ಆಡುತ್ತೀರಿ ಎಂಬುದನ್ನು ಹಣ ವ್ಯಾಖ್ಯಾನಿಸುವುದಿಲ್ಲ' ಎಂದು ಹೇಳಿದರು.
'ನಮ್ಮಲ್ಲಿ ಅಂಗ್ರೀಶ್ ರಘುವಂಶಿ ಎಂಬ ಯುವ ಆಟಗಾರ ಇದ್ದಾರೆ. ಅವರು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೆಚ್ಚಿನ ಸಂಭಾವನೆ ಪಡೆದಾಗ ನಿರೀಕ್ಷೆಗಳು ಮತ್ತು ಪ್ರಶ್ನೆಗಳು ಬಹಳಷ್ಟು ಬರುತ್ತದೆ ಎಂದು ನನಗೆ ತಿಳಿದಿದೆ. ಆದರೆ, ನಾನು ತಂಡದ ಯಶಸ್ಸಿಗೆ ಕೊಡುಗೆ ನೀಡಲು ಬಯಸುವ ಆಟಗಾರ. ಕೆಲವು ಎಸೆತಗಳು ಬಾಕಿ ಇರುವಾಗ ನನ್ನ ತಂಡವು ನನ್ನನ್ನು ಆಡುವಂತೆ ಕೇಳಿದಾಗ ಆ ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗುತ್ತದೆ. ನಾನು ಅಷ್ಟು ರನ್ ಗಳಿಸದಿದ್ದರೂ, ನಾನು ನನ್ನ ತಂಡಕ್ಕಾಗಿ ಕೆಲಸ ಮಾಡಿದ್ದೇನೆ. ಇದರರ್ಥ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗನಾಗಿ ನಾನು ಪ್ರತಿ ಪಂದ್ಯದಲ್ಲೂ ಹೆಚ್ಚಿನ ರನ್ ಗಳಿಸಬೇಕು ಎಂದರ್ಥವಲ್ಲ. ತಂಡದ ಮೇಲೆ ಪರಿಣಾಮ ಬೀರುವುದು ಮುಖ್ಯವಾಗಿರುತ್ತದೆ' ಎಂದರು.
'ಹೌದು, ಸ್ವಲ್ಪ ಒತ್ತಡವಿದೆ, ನಾನು ಸುಳ್ಳು ಹೇಳುವುದಿಲ್ಲ. ಒತ್ತಡ ಹಣದ ಬಗ್ಗೆ ಅಲ್ಲ, ತಂಡದ ಯಶಸ್ಸಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ' ಎಂದು ಅವರು ಹೇಳಿದರು.
ಅಯ್ಯರ್ ತಮ್ಮ ಕೊನೆಯ 12 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳನ್ನು ಬಾರಿಸಿ ಡೆತ್ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 19 ನೇ ಓವರ್‌ನಲ್ಲಿ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್‌ನಲ್ಲಿ 20 ರನ್ ಗಳಿಸಿ ತಂಡಕ್ಕೆ ನೆರವಾದರು.
'ಯಾರು ಬೌಲಿಂಗ್ ಮಾಡುತ್ತಿದ್ದಾರೆಂದು ನಾನು ನೋಡುವುದಿಲ್ಲ. ಫೀಲ್ಡ್ ಪ್ಲೇಸ್ಮೆಂಟ್ ನೋಡಿ, ಹೇಗೆ ಬೌಲಿಂಗ್ ಮಾಡಲಾಗುತ್ತಿದೆ ಎಂಬುದರ ಮೇಲೆ ಯಾವಾಗಲೂ ನನ್ನ ಗಮನವಿರುತ್ತದೆ. ಇದು ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್ ಆಗಿರಲಿಲ್ಲ. ಕ್ವಿಂಟನ್ ಡಿ ಕಾಕ್, ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್‌ನಂತಹ ಕೆಲವು ಕ್ಲೀನ್ ಸ್ಟ್ರೈಕರ್‌ಗಳು ಪಿಚ್‌ನಿಂದ ವೇಗವನ್ನು ನಿರ್ಣಯಿಸಲು ವಿಫಲರಾದರು. ತಕ್ಷಣ ಹೊಡೆಯಲು ಪ್ರಾರಂಭಿಸುವುದು ಕಷ್ಟಕರವಾಗಿತ್ತು. ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಾನು ಮತ್ತು ರಿಂಕು ಸಿಂಗ್ (17 ಎಸೆತಗಳಲ್ಲಿ 32*) ಸಹ ಮೊದಲಿಗೆ ಕೆಲವು ಎಸೆತಗಳನ್ನು ಎದುರಿಸಬೇಕಿತ್ತು' ಎಂದು ತಿಳಿಸಿದರು.
'ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ಮತ್ತು ಅಂಗ್ರಿಶ್ ಬ್ಯಾಟಿಂಗ್ ಮಾಡುವಾಗ ಇದು ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್ ಅಲ್ಲ ಎಂಬುದು ತಿಳಿಯಿತು. ಚೆಂಡು ಸ್ಟಿಕ್ಕಿ ಆಗಿತ್ತು. ಅದು ತಿರುಗುತ್ತಿತ್ತು. ಆದ್ದರಿಂದ, ಆ ಸಮಯದಲ್ಲಿ ಪಿಚ್ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿತ್ತು. ನಮ್ಮಲ್ಲಿ ರಿಂಕು, ರಸೆಲ್ ಮತ್ತು ರಮಣದೀಪ್ ಇದ್ದಾರೆ. ಯಾವುದೇ ಬೌಲಿಂಗ್ ದಾಳಿಯನ್ನು ಎದುರಿಸಬಲ್ಲ ಎಂಜಿನ್ ಕೋಣೆ ನಮ್ಮಲ್ಲಿದೆ' ಎಂದು ಅಯ್ಯರ್ ಹೇಳಿದರು.
Advertisement