
2025ರ ಐಪಿಎಲ್‌ನಲ್ಲಿ ರಿಷಭ್ ಪಂತ್ ಅವರಿಗೆ ಉತ್ತಮ ಆರಂಭ ಸಿಕ್ಕಿಲ್ಲ. ತಾವು ಆಡಿರುವ ಮೂರು ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದಾರೆ. ಅಷ್ಟೇ ಅಲ್ಲದೆ, ಅವರ ನಾಯಕತ್ವ ಕೂಡ ಅನೇಕರಿಂದ ಟೀಕೆಗೆ ಗುರಿಯಾಗಿದೆ. ಪಂತ್ ಸದ್ಯ ಈ ಆವೃತ್ತಿಯಲ್ಲಿ ಮೂರು ಪಂದ್ಯಗಳಿಂದ ಕೇವಲ 17 ರನ್ ಗಳಿಸಿದ್ದಾರೆ. ತಮ್ಮ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಕಂಡಾಗಲೆಲ್ಲ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ, ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲು ಕಂಡ ಬೆನ್ನಲ್ಲೇ ರಿಷಬ್ ಪಂತ್ ಅವರೊಂದಿಗೆ ಮೈದಾನದಲ್ಲಿಯೇ ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ.
ಕಳೆದ ವರ್ಷ, ಎಲ್‌ಎಸ್‌ಜಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಜುಗರದ ಸೋಲನ್ನು ಅನುಭವಿಸಿದ ನಂತರ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಸಂಜೀವ್ ಗೋಯೆಂಕಾ ಅವರು ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು.
ಇದೀಗ ಎಲ್‌ಎಸ್‌ಜಿ ಸೋಲಿನ ನಂತರ ಗೋಯೆಂಕಾ ಮತ್ತು ಪಂತ್ ನಡುವಿನ ತೀವ್ರವಾದ ಮಾತುಕತೆಯ ವಿಡಿಯೋಗಳು ಹೊರಬಂದ ತಕ್ಷಣ, ಅನೇಕ ಅಭಿಮಾನಿಗಳು ಅದನ್ನು ಕಳೆದ ಆವೃತ್ತಿಯಲ್ಲಿ ರಾಹುಲ್ ಜೊತೆಗಿನ ಅವರ ವೈರಲ್ ಸಂಭಾಷಣೆಗೆ ಹೋಲಿಸಲು ಪ್ರಾರಂಭಿಸಿದರು. ಪಂಜಾಬ್ ಕಿಂಗ್ಸ್ ವಿರುದ್ಧ ಎಲ್‌ಎಸ್‌ಜಿ ಸೋಲು ಕಂಡ ಕೂಡಲೇ ಗೋಯೆಂಕಾ ಪಂತ್ ಅವರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.
1983ರ ವಿಶ್ವಕಪ್ ವಿಜೇತ ತಂಡದ ಭಾರತದ ಮಾಜಿ ವೇಗಿ ಮದನ್ ಲಾಲ್ ಅವರು ಸಂಜೀವ್ ಗೋಯೆಂಕಾ ಅವರಿಗೆ ಒಂದು ಸಲಹೆಯನ್ನು ಹಂಚಿಕೊಂಡಿದ್ದಾರೆ. ಆಟಗಾರರನ್ನು ಮುಕ್ತವಾಗಿ ಆಡಲು ಬಿಡುವಂತೆ ಮತ್ತು ಅಂತಹ ಚರ್ಚೆಗಳನ್ನು ಸಾರ್ವಜನಿಕರ ದೃಷ್ಟಿಯಿಂದ ದೂರವಿಡುವಂತೆ ಒತ್ತಾಯಿಸಿದ್ದಾರೆ.
'ರಿಷಭ್ ಮತ್ತು ಸಂಜೀವ್ ಗೋಯೆಂಕಾ ಅವರ ನಡುವಿನ ಚರ್ಚೆ ಏನೆಂದು ನನಗೆ ತಿಳಿದಿಲ್ಲ. ಆದರೆ, ಇದೆಲ್ಲವೂ ಒಳಗೆ ನಡೆಯಬಹುದು. ಆಟಗಾರರು ಆಟವನ್ನು ಆನಂದಿಸಲಿ, ಅವರು ಮುಕ್ತವಾಗಿ ಆಡಲಿ. 20/20 ಕ್ರಿಕೆಟ್ ತುಂಬಾ ಅನಿರೀಕ್ಷಿತ' ಎಂದು ಮದನ್ ಲಾಲ್ X ನಲ್ಲಿ ಬರೆದಿದ್ದಾರೆ.
ಮಂಗಳವಾರ ಲಕ್ನೋದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಎಲ್‌ಎಸ್‌ಜಿ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ.
Advertisement