
ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 80 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಎಸ್ಆರ್‌ಎಚ್ ತಂಡವು ಸತತ ಮೂರನೇ ಬಾರಿಗೆ ಸೋಲು ಕಂಡಿದೆ. ಫ್ರಾಂಚೈಸಿ ಈವರೆಗೂ ನಾಲ್ಕು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ತಂಡವು 286 ರನ್‌ಗಳ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆದರೆ, ಅದಾದ ಬಳಿಕ ಅವರ ಬ್ಯಾಟ್ಸ್‌ಮನ್‌ಗಳು 200 ರನ್‌ಗಳ ಗಡಿಯನ್ನು ದಾಟಲು ಹೆಣಗಾಡುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್, ಕೇವಲ 4 ರನ್ ಗಳಿಸಿ ನಿರ್ಗಮಿಸಿದರು.
ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ಆಡಿದ ಬಹುತೇಕ ಎಲ್ಲಾ ಫ್ರಾಂಚೈಸಿಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಕೆಆರ್ ವಿರುದ್ಧ ಅವರ ದಾಖಲೆ ಶೋಚನೀಯವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ನೈಟ್ ರೈಡರ್ಸ್ ವಿರುದ್ಧ ಖಾತೆ ತೆರೆಯಲು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ವಿಫಲರಾಗಿದ್ದಾರೆ.
ಹೆಡ್ 4 ರನ್‌ಗಳಿಗೆ ಔಟ್ ಆದ ಬಳಿಕ ಕೆಕೆಆರ್, ಸಾಮಾಜಿಕ ಮಾಧ್ಯಮದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ರನ್ನು ಸಾರ್ವಜನಿಕವಾಗಿ ಟ್ರೋಲ್ ಮಾಡಿದೆ.
'ಆರಂಭದಿಂದಲೇ ವ್ಯವಹಾರದತ್ತ ಮುನ್ನಡೆಯಿರಿ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಈ ಆವೃತ್ತಿಯಲ್ಲಿ ತಮ್ಮ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ಸೋಲಿಗೆ ಬ್ಯಾಟ್ಸ್‌ಮನ್‌ಗಳು ಮತ್ತು ಫೀಲ್ಡರ್‌ಗಳ ವೈಫಲ್ಯವೇ ಕಾರಣ ಎಂದು SRH ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು.
201 ರನ್ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಕೆಕೆಆರ್ ವೇಗಿಗಳು ಆಘಾತ ನೀಡಿದರು. ಟ್ರಾವಿಸ್ ಹೆಡ್ ಕೇವಲ 4 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 2 ರನ್ ಹಾಗೂ ಇಶಾನ್ ಕಿಶನ್ 2 ರನ್ ಗಳಿಸಿ ಪೆವಿಲಿಯನ್ ಕಡೆಗೆ ನಡೆದರು. 16.4 ಓವರ್‌ಗಳಲ್ಲೇ 120 ರನ್ ಗಳಿಸುಷ್ಟರಲ್ಲಿ ಆಲೌಟ್ ಆಗುವ ಮೂಲಕ 80 ರನ್‌ಗಳ ಹೀನಾಯ ಸೋಲು ಕಂಡಿತು. 80 ರನ್‌ಗಳ ಭರ್ಜರಿ ಗೆಲುವಿನ ಮೂಲಕ 8ನೇ ಸ್ಥಾನದಲ್ಲಿದ್ದ ಕೆಕೆಆರ್ 5ನೇ ಸ್ಥಾನಕ್ಕೇರಿದೆ.
Advertisement