
ಚಂಡಿಘಡ: ಇಂಡಿಯನ್ ಪ್ರೀಮಿಯರ್ ಲೀಗ್ ನ ಇಂದಿನ 2ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ರಾಜಸ್ತಾನ ರಾಯಲ್ಸ್ ತಂಡ 50 ರನ್ ಗಳ ಅಂತರದಲ್ಲಿ ಮಣಿಸಿದೆ.
ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ರಾಜಸ್ತಾನ ತಂಡ ನೀಡಿದ್ದ 206 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 155ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ರಾಜಸ್ತಾನ ಭರ್ಜರಿ ಬೌಲಿಂಗ್
ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಪ್ರಬಲ ಪಂಜಾಬ್ ಎದುರು ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ಜೋಫ್ರಾ ಆರ್ಚರ್ 4 ಓವರ್ ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರು. ಅವರಿಗೆ ಉತ್ತಮ ಸಾಥ್ ನೀಡಿದ ಸಂದೀಪ್ ಶರ್ಮಾ ಮತ್ತು ಮಹೀಶ ತೀಕ್ಷ್ಣ ತಲಾ 2 ವಿಕೆಟ್ ಪಡೆದರು. ಕುಮಾರ ಕಾರ್ತಿಕೇಯ ಮತ್ತು ವನಿಂದು ಹಸರಂಗ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪಾತ್ರವಹಿಸಿದರು.
ಟಾಸ್ ಸೋತರೂ ಭರ್ಜರಿ ಬ್ಯಾಟಿಂಗ್ ಮಾಡಿದ ರಾಜಸ್ತಾನ
ಇನ್ನು ಟಾಸ್ ಸೋತರೂ ಭರ್ಜರಿ ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡ 205 ರನ್ ಗಲ ಬೃಹತ್ ಮೊತ್ತ ಕಲೆಹಾಕಿತು. ರಾಜಸ್ತಾನ ಪರ ಯಶಸ್ವಿ ಜೈಸ್ವಾಲ್ 67 ರನ್ ಪೇರಿಸಿದರೆ ನಾಯಕ ಸಂಜು ಸ್ಯಾಮ್ಸನ್ 38 ರನ್ ಸಿಡಿಸಿದರು. ಅಂತೆಯೇ ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಅಜೇಯ 43 ರನ್ ಗಳಿಸದರೆ, ಹೇಟ್ಮಯರ್ 20 ಮತ್ತು ಧ್ರುವ್ ಜುರೆಲ್ ಅಜೇಯ 13ರನ್ ಗಳಿ ತಂಡದ ಬೃಹತ್ ಮೊತ್ತದ ಪಾಲುದಾರರಾದರು.
ಲಾಸ್ಟ್ ಬಾಲ್ ಡ್ರಾಮಾ, ಏನಾಯ್ತು ಮೈದಾನದಲ್ಲಿ!
ಇನ್ನು ಪಂಜಾಬ್ ಚೇಸಿಂಗ್ ವೇಳೆ 19ನೇ ಓವರ್ ಅಂತಿಮ ಎಸೆತದಲ್ಲಿ ಮೈದಾನದಲ್ಲಿ ಅಕ್ಷರಶಃ ಹೈಡ್ರಾಮಾವೇ ನಡೆಯಿತು. ಅಂತಿಮ ಓವರ್ ನಲ್ಲಿ ಪಂಜಾಬ್ ಗೆ ಗೆಲ್ಲಲು 56ರನ್ ಗಳ ಅಗತ್ಯವಿತ್ತು. ಹೀಗಾಗಿ ಅದಾಗಲೇ ರಾಜಸ್ತಾನ ತಂಡದ ಗೆಲುವು ಖಚಿತವಾಗಿತ್ತು. ಆದಾಗ್ಯೂ ಪಂದ್ಯದ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು.
ಜೋಫ್ರಾ ಆರ್ಚರ್ ಅಂತಿಮ ಓವರ್ ಎಸೆದರು. ಮೊದಲ ಐದು ಎಸೆತಗಳಲ್ಲಿ ಕೇವಲ 1 ರನ್ ಮಾತ್ರ ಬಂತು. ಅಂತೆಯೇ ಅರ್ಶ್ ದೀಪ್ ಸಿಂಗ್ ವಿಕೆಟ್ ಪತನವಾಯಿತು. ಅಂತಿಮ ಎಸೆತದ ವೇಳೆ ಲಾಕಿಫರ್ಗೂಸನ್ ಬೌಂಡರಿ ಪಡೆದರೂ ಫಲಿತಾಂಶ ಪ್ರಕಟಿಸಲು ಅಂಪೈರ್ ಗಳು ಸಮಯ ತೆಗೆದುಕೊಂಡರು.
ಕಾರಣ ಪವರ್ ಪ್ಲೇ ಚಾಲ್ತಿಯಲ್ಲಿದ್ದರಿಂದ ಸರ್ಕಲ್ ನಲ್ಲಿ ನಿಯಮಾನುಸಾರ ಫೀಲ್ಡರ್ ಗಳು ಇರಲಿಲ್ಲ. ಹೀಗಾಗಿ ಅಂಪೈರ್ ಗಳು ರೆಫರಿ ಮತ್ತು ಥರ್ಡ್ ಅಂಪೈರ್ ಗಳ ಮೊರೆ ಹೋದರು. ಈ ವೇಳೆ ಅಂಪೈರ್ ಗಳು ಕ್ಯಾಮೆರಾಗಳಲ್ಲಿ ಫೀಲ್ಡಿಂಗ್ ಪರಿಶೀಲಿಸಿ ಕೆಲ ಹೊತ್ತಿನ ಬಳಿಕ ಕೊನೆಗೂ ಬೌಂಡರಿ ಘೋಷಣೆ ಮಾಡಿದರು. ಅಂತಿಮವಾಗಿ ರಾಜಸ್ತಾನ ತಂಡ 50 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತು.
Advertisement