ನವದೆಹಲಿ: ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಂದ ಗೆಲುವು ಸಾಧಿಸಿತು. 10 ವರ್ಷಗಳ ಬಳಿಕ ಮುಂಬೈನಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಸಿಎಸ್‌ಕೆ ಮಾಜಿ ಬ್ಯಾಟರ್ ಅಂಬಟಿ ರಾಯುಡು ಆರ್‌ಸಿಬಿ ತಂಡದ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದು, ಐಪಿಎಲ್ 2025ರ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಸುದೀರ್ಘ 18 ವರ್ಷಗಳಿಂದ ಮೊದಲ ಪ್ರಶಸ್ತಿ ಗೆಲ್ಲಲು ಕಾಯುತ್ತಿರುವ ಆರ್ ಸಿಬಿ ತಂಡಕ್ಕೆ ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವ ಅವಕಾಶವಿದೆ ಎಂದು ರಾಯುಡು ಹೇಳಿದ್ದಾರೆ.
ಆರ್‌ಸಿಬಿ ತಂಡದ ಬಗ್ಗೆ ಮಾತನಾಡಿದ, "ನೀವು ಆ ತಂಡವನ್ನು ನೋಡಿದರೆ, ಅವರಲ್ಲಿ ಉತ್ತಮ ಸಂಯೋಜನೆ ಇದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡದ ತಂಡಗಳನ್ನು ನೀವು ನೋಡಿದರೆ, ಅವರು ಇನ್ನೂ ತಮ್ಮ ಪ್ಲೇಯಿಂಗ್ ಇಲೆವೆನ್ ಬದಲಾವಣೆ ಮಾಡುತ್ತಿದ್ದಾರೆ. ಆದರೆ ಆರ್‌ಸಿಬಿ ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಕೂಡ ಉತ್ತಮ ಸಂಯೋಜನೆ ಹೊಂದಿವೆ ಎಂದರು.
"ನಾನು ಆರ್‌ಸಿಬಿ ಆಟವನ್ನು ಯಾವಾಗಲೂ ಆನಂದಿಸಿದ್ದೇನೆ. ಅವರ ಹರಾಜಿನ ಬಗ್ಗೆ ತಮಾಷೆ ಮಾಡಿದ್ದೇವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆರ್‌ಸಿಬಿ ಯಾವಾಗಲೂ ಐಪಿಎಲ್ ಗೆಲ್ಲಬಲ್ಲ ತಂಡವನ್ನು ಹೊಂದಿರುವುದರಿಂದ ಮಾತ್ರ ಅವರ ಬಗ್ಗೆ ಮಾತನಾಡುತ್ತೇವೆ. ಆದರೂ ಅವರು ತಮ್ಮದೇ ಆದ ನ್ಯೂನತೆಗಳಿಂದಾಗಿ ವಿಫಲರಾಗುತ್ತಾರೆ. ಬೇರೆ ಯಾರೂ ಅವರನ್ನು ಸೋಲಿಸುವುದಿಲ್ಲ, ಅವರದೇ ತಪ್ಪಿನಿಂದ ಸೋಲುತ್ತಾರೆ. ಆದರೆ ಈ ವರ್ಷ, ರಜತ್ ಪಾಟಿದಾರ್ ಅವರ ನಾಯಕತ್ವದಲ್ಲಿ ಈ ವರ್ಷ ಕಪ್ ಗೆಲ್ಲುವ ಸಾಧ್ಯತೆ ಇದೆ ಎಂದರು.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು, ಆರು ಅಂಕಗಳೊಂದಿಗೆ ಆರ್‌ಸಿಬಿ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಆರ್ ಸಿಬಿ ಸೋಲು ಕಂಡಿದ್ದು, ಹೊರಗಡೆ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಒತ್ತಡದ ಸಮಯದಲ್ಲೂ ಪಾಟಿದಾರ್ ಅವರು ಸಮಧಾನದಿಂದ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ರಾಯುಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 16 ನೇ ಓವರ್‌ನಲ್ಲಿ ಮುಂಬೈ 170/4 ರೊಂದಿಗೆ ಗೆಲುವಿನ ಸನಿಹವಿದ್ದಾಗಲೂ ಆರ್‌ಸಿಬಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
"20 ಓವರ್‌ಗಳಲ್ಲಿ ನಾಯಕತ್ವದಲ್ಲಿ ಭುವನೇಶ್ವರ್ ಕುಮಾರ್ ಬಳೀ ಬೇಗನೆ ಬೌಲಿಂಗ್ ಮಾಡಿಸುವುದು ದೊಡ್ಡ ಲಾಭ. ಏಕೆಂದರೆ ನಾವು ಸಾಮಾನ್ಯವಾಗಿ ಭುವಿಯನ್ನು 19 ಅಥವಾ 20 ನೇ ಓವರ್ ನಲ್ಲಿ ಬೌಲಿಂಗ್ ಮಾಡಲು ಕರೆಯುತ್ತೇವೆ. ಆದರೆ ಭುವಿ ಅವರ ಅನುಭವದ ಅಗತ್ಯವಿದ್ದಾಗ, ಆಟವನ್ನು ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದಾಗ ಬೇಗನೆ ಬೌಲಿಂಗ್ ಮಾಡಿಸುವುದು ಅದ್ಭುತ ನಿರ್ಧಾರ" ಎಂದು ರಾಯುಡು ಹೇಳಿದರು.
Advertisement