
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರ ನಾಯಕತ್ವ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಅಷ್ಟೇನು ಉತ್ತಮ ಪ್ರದರ್ಶನ ತೋರಿಲ್ಲ. ಹೀಗಾಗಿ ಅವರ ವಿಕೆಟ್ ಪಡೆಯಲೆಂದೇ ಎಡಗೈ ವೇಗಿ ಯಶ್ ದಯಾಳ್ ಅವರನ್ನು ಬೌಲಿಂಗ್ ಮಾಡಲು ಕಳುಹಿಸಿದ ಪಾಟೀದಾರ್ ನಡೆಗೆ ತಕ್ಕ ಬಹುಮಾನ ಸಿಕ್ಕಿದೆ. ಯಶ್ ದಯಾಳ್ ಅವರ ಎಸೆತದಲ್ಲಿ ರೋಹಿತ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಕೇವಲ 17 ರನ್‌ಗಳಿಗೆ ನಿರ್ಗಮಿಸಿದರು.
ಮುಂಬೈ ತಂಡ ಆರ್‌ಸಿಬಿ ವಿರುದ್ಧ ಸೋಲು ಕಂಡಿದ್ದರಿಂದ ಅಸಮಾಧಾನಗೊಂಡಿದ್ದರೂ ರೋಹಿತ್ ಶರ್ಮಾ, ತಮ್ಮದೇ ವಿಕೆಟ್ ಕಿತ್ತ ಯಶ್ ದಯಾಳ್ ಅವರಿಗೆ ಅಮೂಲ್ಯ ಉಡುಗೊರೆಯೊಂದನ್ನು ನೀಡುವ ಮೂಲಕ ಯುವ ಆಟಗಾರನನ್ನು ಹುರಿದುಂಬಿಸಿದ್ದಾರೆ.
ಪಂದ್ಯ ಮುಗಿದ ನಂತರ, ಯಶ್ ದಯಾಳ್ ಅವರು ಫೋಟೋ ತೆಗೆಸಿಕೊಳ್ಳಲು ರೋಹಿತ್ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ರೋಹಿತ್ ಆರ್‌ಸಿಬಿ ಟೀಶರ್ಟ್ ಮೇಲೆ ಹಸ್ತಾಕ್ಷರ ನೀಡಿದ್ದು, 'ಶುಭಾಶಯಗಳು' ಎಂದು ಬರೆದಿದ್ದಾರೆ. ಈ ಫೋಟೊ ಹಂಚಿಕೊಂಡಿರುವ ಯಶ್ ದಯಾಳ್, 'ಕೃತಜ್ಞತಾಪೂರ್ವಕ ಮತ್ತು ಮರೆಯಲಾಗದ ಕ್ಷಣವಾಗಿದೆ' ಎಂದು ಬರೆದಿದ್ದಾರೆ.
ಪಂದ್ಯದಲ್ಲಿ ತಮ್ಮ ವಿಕೆಟ್ ಪಡೆದ ಆರ್‌ಸಿಬಿ ವೇಗಿ ಯಶ್ ದಯಾಳ್ ಜೊತೆಗೆ ರೋಹಿತ್ ಶರ್ಮಾ ಅವರು ತೋರಿದ ನಡೆಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಹೃದಯ ಗೆದ್ದಿದೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲ ಜಯವರ್ಧನೆ ಅವರನ್ನು ದಯಾಳ್ ಕೈಯಲ್ಲಿ ರೋಹಿತ್ ಔಟ್ ಆದ ಬಗ್ಗೆ ಕೇಳಿದಾಗ, ಆರ್‌ಸಿಬಿ ವೇಗಿಯ ಕೌಶಲ್ಯಪೂರ್ಣ ಎಸೆತವನ್ನು ಶ್ಲಾಘಿಸಿದರು.
'ಎಡಗೈ ಬೌಲರ್‌ಗಳು ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ, ವಿಶೇಷವಾಗಿ ಆರಂಭಿಕ ಆಟಗಾರರ ವಿರುದ್ಧ ನೈಸರ್ಗಿಕ ಪ್ರಯೋಜನವನ್ನು ಹೊಂದಿದ್ದಾರೆ. ಅನೇಕ ತಂಡಗಳು ಹಲವು ವರ್ಷಗಳಿಂದ ಬಳಸುತ್ತಿರುವ ಸಾಮಾನ್ಯ ಕಾರ್ಯತಂತ್ರ ಇದಾಗಿದೆ. ಆದರೆ ಹೌದು, ರೋಹಿತ್ ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಖಚಿತವಾಗಿದೆ. ಅವರು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಅವರು ಬಹಳ ಅನುಭವಿ ಆಟಗಾರ' ಎಂದು ಹೇಳಿದರು.
Advertisement