
ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ 17 ರನ್‌ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಎಡವಿದ್ದಾರೆ. ಈ ಆವೃತ್ತಿಯ ಆರಂಭದಿಂದಲೂ ರೋಹಿತ್ ಶರ್ಮಾ ಕಳಪೆ ಫಾರ್ಮ್ ಮುಂದುವರಿಸಿದ್ದು, ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.
ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಈ ಪಂದ್ಯಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದರು. ರೋಹಿತ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಉತ್ತಮ ಆರಂಭ ಕಂಡರಾದರೂ ಆರ್‌ಸಿಬಿ ಬೌಲರ್ ಯಶ್ ದಯಾಳ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ರೋಹಿತ್ ಅವರು ಔಟ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.
ರೋಹಿತ್ ಶರ್ಮಾ ಈಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊರೆಯಾಗಿ ಪರಿಣಮಿಸಿದ್ದಾರೆ. ಕಳಪೆ ಫಾರ್ಮ್, ನೆಗೆಟೀವ್ ವೈಬ್ ಮತ್ತು ಝೀರೋ ಇಂಟೆಂಟ್ ಆದರೆ ಫುಲ್ ಆ್ಯಟಿಟ್ಯೂಡ್. ಎಂತಹ ನಿರಾಶಾದಾಯಕ ಪ್ರದರ್ಶನ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ರೋಹಿತ್ ಶರ್ಮಾ ಆಡಿದರೂ ಅಥವಾ ಹೊರಗುಳಿದಿದ್ದರೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
ಕೆಲವು ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರು 3 ಬಳಿಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಐಪಿಎಲ್ 2025ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿರುವ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದರು. ಬುಮ್ರಾ ನಿರೀಕ್ಷೆಯಂತೆ ಉತ್ತಮವಾಗಿ ಬೌಲಿಂಗ್ ಮಾಡಿದರಾದರೂ ತಂಡವನ್ನು ಸೋಲಿನಿಂದ ತಪ್ಪಿಸಲಾಗಲಿಲ್ಲ. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ಐಪಿಎಲ್ 2025ರ 21ನೇ ಪಂದ್ಯದಲ್ಲಿ ಐದು ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕಿತು.
ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 67 ರನ್ ಗಳಿಸಿದರೆ, ನಾಯಕ ಪಾಟಿದಾರ್ 32 ಎಸೆತಗಳಲ್ಲಿ 64 ರನ್ ಗಳಿಸಿದರು.
Advertisement