IPL 2025: KKR ಸೋಲಿಸಲು ಟಿ20 ವಿಶ್ವಕಪ್ ಮಾದರಿಯ 'ಮಾಸ್ಟರ್ ಪ್ಲ್ಯಾನ್' ಮಾಡಿದ ರಿಷಬ್ ಪಂತ್; ಅಭಿಮಾನಿಗಳು ಹೇಳಿದ್ದೇನು?

13ನೇ ಓವರ್ ಆರಂಭದಲ್ಲಿ ಪಂತ್ ಅವರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ಈ ವೇಳೆ ಎಲ್‌ಎಸ್‌ಜಿ ಡಗೌಟ್ ಆತಂಕಕ್ಕೊಳಗಾಯಿತು. ಪಂತ್ ಮೈದಾನದಲ್ಲಿಯೇ ಚಿಕಿತ್ಸೆ ಪಡೆದರು.
ಮೆಂಟರ್ ಜಹೀರ್ ಖಾನ್ ಜೊತೆಗೆ ರಿಷಬ್ ಪಂತ್
ಮೆಂಟರ್ ಜಹೀರ್ ಖಾನ್ ಜೊತೆಗೆ ರಿಷಬ್ ಪಂತ್
Updated on

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಂಗಳವಾರ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 4 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಕೆಕೆಆರ್ ವಿರುದ್ಧ ಗೆಲುವು ಸಾಧಿಸಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್ ಮಾಡಿದ 'ಮಾಸ್ಟರ್ ಪ್ಲಾನ್' ಅನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿದ್ದಾರೆ.

ನಿಕೋಲಸ್ ಪೂರನ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಪೂರನ್ 36 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆಯಿತು. ಆದರೂ, ಗೆಲುವು ಕಾಣಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ 4 ರನ್‌ಗಳಿಂದ ಸೋಲು ಕಂಡಿತು.

12 ಓವರ್‌ ನಂತರ, ಕೋಲ್ಕತ್ತಾ ಎರಡು ವಿಕೆಟ್‌ ನಷ್ಟಕ್ಕೆ 149 ರನ್ ಗಳಿಸಿತ್ತು. ಉಳಿದ 48 ಎಸೆತಗಳಲ್ಲಿ 90 ರನ್ ಗಳಿಸಬೇಕಾಗಿತ್ತು. ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಎಲ್‌ಎಸ್‌ಜಿ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ಶಾರ್ದೂಲ್ ಠಾಕೂರ್ ಎಸೆತದಲ್ಲಿ ರಹಾನೆ ಔಟ್ ಆಗುತ್ತಾರೆ. ಐದು ವೈಡ್ ಬಾಲ್‌ಗಳನ್ನು ಎಸೆಯುವ ಶಾರ್ದೂಲ್ ಒಂದು ಓವರ್‌ನಲ್ಲಿ 11 ಎಸೆತಗಳನ್ನು ಎಸೆಯುತ್ತಾರೆ. ಆದರೆ, 13ನೇ ಓವರ್ ಆರಂಭದಲ್ಲಿ ಪಂತ್ ಅವರ ವರ್ತನೆಯಿಂದಾಗಿ ಕೆಕೆಆರ್ ತಂಡದ ವೇಗ ಕಡಿಮೆಯಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರೆ.

ಪಂತ್ ಅವರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ಈ ವೇಳೆ ಎಲ್‌ಎಸ್‌ಜಿ ಡಗೌಟ್ ಆತಂಕಕ್ಕೊಳಗಾಯಿತು. ಪಂತ್ ಮೈದಾನದಲ್ಲಿಯೇ ಚಿಕಿತ್ಸೆ ಪಡೆದರು. ಇದರಿಂದಾಗಿ ಆಟದ ವೇಳೆ ಸ್ವಲ್ಪ ವಿಳಂಬವಾಯಿತು. ನಂತರ ಪಂದ್ಯವನ್ನು ಮುಂದುವರಿಸಲಾಯಿತು.

ಅಭಿಮಾನಿಗಳು ಪಂತ್ ಅವರಿಗೆ ಕಾಣಿಸಿಕೊಂಡ ಬೆನ್ನುನೋವು ನಾಟಕ ಎಂದು ಕರೆದಿದ್ದಾರೆ. ಇದರಿಂದಾಗಿ ಕೆಕೆಆರ್ ತಂಡದ ವೇಗ ಕುಸಿಯಿತು. ಕಳೆದ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ ವೇಳೆಯೂ ಪಂತ್ ಅವರು ಈ ತಂತ್ರವನ್ನು ಬಳಸಿದ್ದರು. ನಂತರ ಹೆನ್ರಿಕ್ ಕ್ಲಾಸೆನ್ ಅವರ ಔಟ್ ಪಂದ್ಯವನ್ನೇ ಬದಲಾಯಿಸಿತು.

ಬಾರ್ಬಡೋಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ವಿಳಂಬ ತಂತ್ರವನ್ನು ಬಳಸಿದ್ದಾಗಿ ಪಂತ್ ಒಪ್ಪಿಕೊಂಡಿದ್ದರು. ಅದಾದ ನಂತರ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ್ದ ಅವರು, 'ಮೊಮೆಂಟಮ್ ಇದ್ದಕ್ಕಿದ್ದಂತೆ ದಕ್ಷಿಣ ಆಫ್ರಿಕಾ ಪರವಾಗಿ ಬದಲಾಯಿತು. ಅವರು 2-3 ಓವರ್‌ಗಳಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಆಗ ನಾವು ವಿಶ್ವಕಪ್ ಫೈನಲ್ ಆಡುವ ಆ ಕ್ಷಣ ಯಾವಾಗ ಬರುತ್ತದೆ ಎಂದು ನಾನು ಯೋಚಿಸುತ್ತಿದ್ದೆ' ಎಂದಿದ್ದರು.

'ನಾನು ಫಿಸಿಯೋಗೆ ಸಮಯ ತೆಗೆದುಕೊಳ್ಳುವಂತೆ ಹೇಳುತ್ತಿದ್ದೆ. ರೋಹಿತ್ ಭಾಯಿ ನನ್ನ ಮೊಣಕಾಲು ಚೆನ್ನಾಗಿದೆಯೇ ಎಂದು ಕೇಳಿದಾಗ, 'ಭಯ್ಯಾ, ಮಸ್ತ್ ಆಕ್ಟಿಂಗ್ ಕರ್ ರಹಾ ಥಾ' (ನಾನು ಆ್ಯಕ್ಟಿಂಗ್ ಮಾಡುತ್ತಿದ್ದೆ) ಎಂದು ಹೇಳಿದೆ. ಕೆಲವೊಮ್ಮೆ ಪಂದ್ಯಗಳಲ್ಲಿ ಈ ರೀತಿಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಅದು ಪ್ರತಿ ಬಾರಿಯೂ ಕೆಲಸ ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಅದು ಕೆಲವೊಮ್ಮೆ ಕೆಲಸ ಮಾಡುತ್ತದೆ' ಎಂದು ಅವರು ಹೇಳಿದರು.

ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಂಡ ಪ್ರತಿಕ್ರಿಯೆಗಳ ಹೊರತಾಗಿಯೂ, ವಿಕೆಟ್ ಕೀಪಿಂಗ್ ಮಾಡುವಾಗ ತಮ್ಮ ಬೆನ್ನಿಗೆ ಗಾಯವಾಗಿತ್ತು. ಈಗ ನಾನು ಚೆನ್ನಾಗಿದ್ದೇನೆ ಎಂದು ರಿಷಬ್ ಪಂತ್ ಸ್ಪಷ್ಟಪಡಿಸಿದ್ದಾರೆ.

'ಈಗ ನಾನು ಚೆನ್ನಾಗಿದ್ದೇನೆ' ಎಂದು ಪಂದ್ಯದ ನಂತರ ಅವರು ಹೇಳಿದರು.

ಲಕ್ನೋ ತಂಡವು ತನ್ನ ಮುಂದಿನ ಎರಡು ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧ ಮತ್ತು ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com