
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಲಿದೆ. ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಫ್ರಾಂಚೈಸಿಗೆ ಗೆದ್ದು ಕೊಡುವ ತಮ್ಮ ಕನಸಿನ ಕುರಿತು ಮಾತನಾಡಿದ್ದಾರೆ.
ಮೂರು ಆವೃತ್ತಿಗಳನ್ನು ಬೇರೆ ತಂಡದೊಂದಿಗೆ ಕಳೆದ ಪಡಿಕ್ಕಲ್ ಐಪಿಎಲ್ 2025ನೇ ಆವೃತ್ತಿಯಲ್ಲಿ ಮತ್ತೆ ಆರ್‌ಸಿಬಿಗೆ ಮರಳಿದ್ದಾರೆ. 2022ರಲ್ಲಿ ಪಡಿಕ್ಕಲ್ ಆರ್‌ಸಿಬಿಯಿಂದ ಹೊರಬಂದ ನಂತರ, ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಎರಡು ಆವೃತ್ತಿಗಳಲ್ಲಿ ಮತ್ತು ನಂತರ ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಒಂದು ಆವೃತ್ತಿಯನ್ನು ಆಡಿದ್ದಾರೆ.
ಕಳೆದ ವರ್ಷದ ಮೆಗಾ ಹರಾಜಿನಲ್ಲಿ, ಬೆಂಗಳೂರು ತಂಡವು ಅವರನ್ನು ಅವರ ಮೂಲ ಬೆಲೆಯಾದ 2 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಮತ್ತೊಮ್ಮೆ ವಿರಾಟ್ ಕೊಹ್ಲಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪಡಿಕ್ಕಲ್ ಎರಡು ತಿಂಗಳು ವಿರಾಟ್ ಜೊತೆ ಅಭ್ಯಾಸ ನಡೆಸಿದ್ದು, 24 ವರ್ಷದ ಅವರಿಗೆ ಇದೊಂದು ನಂಬಲಾಗದ ಅನುಭವವಾಗಿದೆ.
'ವಿರಾಟ್ ಜೊತೆ ಕೆಲಸ ಮಾಡುವುದು, ವಿರಾಟ್ ಜೊತೆ ಇರುವುದು ನಿಜಕ್ಕೂ ವಿಶೇಷವಾದ ಅನುಭವ. ನಾನು ಐಪಿಎಲ್‌ನಲ್ಲಿ ಆರ್‌ಸಿಬಿ ಜೊತೆ ಇದ್ದಾಗ, ಅವರನ್ನು ತಂಡದಲ್ಲಿ ನನ್ನ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿತ್ತು ಮತ್ತು ಅದು ಅವಾಸ್ತವಿಕ ಸಂಗತಿಯಾಗಿತ್ತು. ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎರಡು ತಿಂಗಳ ಕಾಲ ನಿಮ್ಮ ಮಾರ್ಗದರ್ಶಕರಾಗಿರುವುದು ತುಂಬಾ ವಿಚಿತ್ರವಾದ ಮತ್ತು ನಂಬಲಸಾಧ್ಯವಾದ ಸಂಗತಿಯಾಗಿತ್ತು. ಅದು ತುಂಬಾ ಆಕರ್ಷಕವಾಗಿತ್ತು. ನೀವು ಅವರಿಂದ ಕಲಿಯಬಹುದಾದ ವಿಷಯಗಳು, ಇಡೀ ದಿನ ಅವರೊಂದಿಗೆ ಇರುವುದು ಮತ್ತು ನಾನು ಬಹಳಷ್ಟು ಕಲಿತದ್ದು ಮರೆಯಲಾಗದ ಅನುಭವ' ಎಂದು ಪಡಿಕ್ಕಲ್ ಆರ್‌ಸಿಬಿ ಬೋಲ್ಡ್ ಡೈರೀಸ್‌ನ ಇತ್ತೀಚಿನ ಆವೃತ್ತಿಯಲ್ಲಿ ಹೇಳಿದ್ದಾರೆ.
ಆರ್‌ಸಿಬಿ ಜೊತೆ ಮತ್ತೆ ಸೇರಿದ ನಂತರ, ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಐಪಿಎಲ್ ಟ್ರೋಫಿಯನ್ನು ಎತ್ತುವ ತನ್ನ ಕನಸನ್ನು ನನಸಾಗಿಸುವ ಗುರಿಯನ್ನು ಹೊಂದಿದ್ದಾರೆ. ಸದ್ಯ ಆರ್‌ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
'ಖಂಡಿತ, ಆರ್‌ಸಿಬಿಗೆ ಐಪಿಎಲ್ ಟ್ರೋಫಿ ಗೆಲ್ಲುವುದು ಒಂದು ಕನಸು. ಆರ್‌ಸಿಬಿ ಅಭಿಮಾನಿಯಾಗಿ, ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಯೂ ಈ ಫ್ರಾಂಚೈಸಿ ಆ ಟ್ರೋಫಿಯನ್ನು ಹೊಂದಬೇಕೆಂದು ಬಯಸುತ್ತಾರೆ. ನಾನು ಕೂಡ ಆರ್‌ಸಿಬಿ ಅಭಿಮಾನಿ ಮತ್ತು ನನಗೂ ಅದೇ ಭಾವನೆ ಇದೆ' ಎಂದು ಅವರು ಹೇಳಿದರು.
'ಪ್ರತಿ ವರ್ಷ, ನಾನು ಐಪಿಎಲ್‌ನ ಭಾಗವಾಗಿದ್ದರೂ ಸಹ, ಆರ್‌ಸಿಬಿಗೆ ಯಾವಾಗಲೂ ಒಂದು ಮೃದುತ್ವ ಇರುತ್ತದೆ. ಅವರನ್ನು ನೋಡುವುದು ಮತ್ತು ಅವರು ಯಶಸ್ವಿಯಾಗುತ್ತಾರೆ ಎಂದು ಆಶಿಸುವುದು. ಆದ್ದರಿಂದ, ನಾನು ತಂಡದ ಭಾಗವಾಗಿಲ್ಲದಿದ್ದರೂ, ಆರ್‌ಸಿಬಿ ಗೆಲ್ಲುತ್ತದೆ ಎಂದು ನಾನು ಯಾವಾಗಲೂ ಆಶಿಸುತ್ತಿದ್ದೆ. ಮತ್ತೆ ಆರ್‌ಸಿಬಿಗೆ ಬಂದಿದ್ದು, ಆರ್‌ಸಿಬಿಗೆ ಆ ಟ್ರೋಫಿಯನ್ನು ಗೆಲ್ಲುವುದು ನನ್ನ ಏಕೈಕ ಕನಸು' ಎಂದು ಹೇಳಿದರು.
Advertisement