ಜಾನ್ ಸೀನಾ ರೀತಿ ಪೋಸ್ ಕೊಟ್ಟ ವಿರಾಟ್ ಕೊಹ್ಲಿ; ಅಮೆರಿಕದ ಕುಸ್ತಿಪಟು ಪ್ರತಿಕ್ರಿಯೆ ಹೇಗಿತ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ವಿರುದ್ಧ ಸೆಣಸಲಿದೆ. ಆರ್‌ಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ವಿಜೇತ ಚಾಂಪಿಯನ್‌ಶಿಪ್ ಪ್ರಶಸ್ತಿ ಉಂಗುರವನ್ನು ಹಾಕಿಕೊಂಡು ಜಾನ್ ಸೀನಾ ಅವರ 'You Can’t See Me' ರೀತಿ ಫೋಸ್ ಕೊಟ್ಟಿದ್ದಾರೆ.
ಜಾನ್ ಸೀನಾ ಅವರ 'ಟ್ರೇಡ್‌ಮಾರ್ಕ್' ನಡೆಯಂತೆ, ವಿರಾಟ್ ಕೊಹ್ಲಿ ತಮ್ಮ ಚಾಂಪಿಯನ್‌ಶಿಪ್ ವಿಜೇತ ಉಂಗುರವನ್ನು ಧರಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಆರ್‌ಸಿಬಿ ಪೋಸ್ಟ್ ಮಾಡಿತ್ತು. ಇದನ್ನು ನೋಡಿದ ನಂತರ ಜಾನ್ ಸೀನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಅವರ ಫೋಟೊವನ್ನು ಹಂಚಿಕೊಂಡಿದ್ದಾರೆ. 'ಓಹ್, ಜಾನ್ ಸೀನಾ' ಎಂದು ಬರೆದಿದ್ದಾರೆ.
ವಿಡಿಯೋದಲ್ಲಿ, 2025ರ ಐಪಿಎಲ್ ಆವೃತ್ತಿಯಲ್ಲಿ ಕೊಹ್ಲಿ ಡ್ರೆಸ್ಸಿಂಗ್ ಕೋಣೆಯ ಒಳಗೆ, ಮೈದಾನದಲ್ಲಿ ಅಥವಾ ಬೌಂಡರಿ ಲೈನ್ ಬಳಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನೃತ್ಯ ಮಾಡುತ್ತಿರುವ ತುಣುಕುಗಳನ್ನು ತೋರಿಸಲಾಗಿದೆ. ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಆಟಗಾರ ಹಾಗೂ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಜೊತೆಗೆ ನೃತ್ಯ ಮಾಡಿರುವ ದೃಶ್ಯಗಳನ್ನು ತೋರಿಸಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಗೆಲುವಿಗೆ ಕಾರಣರಾದರು. ಪಂದ್ಯಾವಳಿಯಲ್ಲಿ ಕೊಹ್ಲಿ ಎಂಟು ಪಂದ್ಯಗಳಿಂದ 112 ಸ್ಟ್ರೈಕ್ ರೇಟ್‌ನೊಂದಿಗೆ 151 ರನ್ ಗಳಿಸಿದ್ದಾರೆ.
ಐಪಿಎಲ್ 2025ನೇ ಆವೃತ್ತಿಯಲ್ಲಿ ವಿರಾಟ್ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಿಂದ 54.67 ಸರಾಸರಿಯಲ್ಲಿ 164 ರನ್ ಗಳಿಸಿದ್ದಾರೆ. ಎರಡು ಅರ್ಧಶತಕಗಳೊಂದಿಗೆ 143 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ.