
ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಸೋಲಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಕನ್ನಡಿಗ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದು, ಅವರು 'ಉತ್ತಮ ಗುಣಮಟ್ಟದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್' ಎಂದು ಕರೆದಿದ್ದಾರೆ.
ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 164 ರನ್‌ಗಳ ಗುರಿ ಬೆನ್ನತ್ತಿದ ವೇಳೆ ರಾಹುಲ್ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸುವ ಮೂಲಕ ತಮ್ಮ ಮಾಜಿ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಲು ನೆರವಾದರು.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿಕ್, 'ಯಾವುದೇ ಪಂದ್ಯದಲ್ಲಿ ಸೋಲು ಕಂಡರೂ ಅದು ನಿರಾಶಾದಾಯಕ. ಇದು ತವರಿನಲ್ಲಿ ನಡೆದ ಪಂದ್ಯ ಎಂಬುದು ವ್ಯತ್ಯಾಸ ಮಾಡುವುದಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ಗೆಲ್ಲಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರ ಕ್ಯಾಚ್ ಕೈಬಿಟ್ಟಿದ್ದು ದುಬಾರಿಯಾಯಿತು. ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶ ಏನೂ ಬೇಕಾದರೂ ಆಗಿರುತ್ತಿತ್ತು. ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಅವರು ಉತ್ತಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ' ಎಂದರು.
'ಟಿ20ಗಳಲ್ಲಿ ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ಸಂಗತಿ ಮತ್ತು ಅವರು ಇತ್ತೀಚಿನ ದಿನಗಳಲ್ಲಿ ನಿಜವಾಗಿಯೂ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಉತ್ತಮ ಗುಣಮಟ್ಟದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಅವರು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಐಪಿಎಲ್‌ಗೆ ಮೊದಲು ಅವರು ಅಭಿಷೇಕ್ ನಾಯರ್ ಅವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ನಾನು ಕೇಳಿದ್ದೇನೆ. ಅದು ಅವರ ಆಟವನ್ನು ಸುಧಾರಿಸಲು ಸಹಾಯ ಮಾಡಿರಬಹುದು. ಇವರಿಗೆ ಮೈದಾನದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದ್ದಾಗ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರ ಇತ್ತೀಚಿನ ಫಾರ್ಮ್ ಅನ್ನು ನೋಡುವುದು ಸಂತೋಷವಾಗಿದೆ' ಎಂದು ಅವರು ಹೇಳಿದರು.
'ವಿಕೆಟ್ ಸ್ಟಿಕ್ಕಿಯಾಗಿತ್ತು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸವಾಲಿನಿಂದ ಕೂಡಿತ್ತು . ಮೊದಲ ನಾಲ್ಕು ಓವರ್‌ಗಳ ನಂತರ, 13ನೇ ಓವರ್‌ವರೆಗೆ ನಾವು ಆಟದಲ್ಲಿದ್ದೆವು. ಆರಂಭದಲ್ಲಿ ಅವರು ಕಷ್ಟಪಡುತ್ತಿದ್ದರು. ಇಬ್ಬರು ಉತ್ತಮ ಗುಣಮಟ್ಟದ ಅಂತರರಾಷ್ಟ್ರೀಯ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ಅಥವಾ ಸ್ಟಬ್ಸ್ ಅವರ ಒಂದೇ ಒಂದು ವಿಕೆಟ್ ಸಿಕ್ಕಿದ್ದರೆ, ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಇದು ಸವಾಲಿನ ಪಿಚ್ ಆಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತಿಲ್ಲ. ಮೊದಲ ಪಂದ್ಯದಲ್ಲಿ, ಇಬ್ಬನಿ ಇತ್ತು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಯಿತು. ಇಂದು, ಹೆಚ್ಚು ಇಬ್ಬನಿ ಇರಲಿಲ್ಲ, ಆದರೆ ಮಳೆ ಬಂದಿತು. ಇದರಿಂದಾಗಿಯೇ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಇದು ಸಾಧ್ಯವಾಗಲಿಲ್ಲ' ಎಂದರು.
'ಎರಡೂ ಇನ್ನಿಂಗ್ಸ್‌ಗಳಲ್ಲಿ wrist ಸ್ಪಿನ್ನರ್‌ಗಳಿಗೆ ಪಿಚ್ ಸಹಾಯ ಮಾಡಿದೆ. 'ಕುಲದೀಪ್ ಯಾದವ್ ಉತ್ತಮ ಗುಣಮಟ್ಟದ ಬೌಲರ್. ಸುಯಾಶ್ ಶರ್ಮಾ ಅವರು ತಮ್ಮಲ್ಲಿರುವ ಕೌಶಲ್ಯದಿಂದ ಉತ್ತಮ ಗುಣಮಟ್ಟದ ಕ್ರಿಕೆಟ್ ಆಡಿದರು' ಎಂದು ತಿಳಿಸಿದರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಡಿಸಿಯ ಕುಲದೀಪ್ ಯಾದವ್ (2/17) ಮತ್ತು ವಿಪ್ರಜ್ ನಿಗಮ್ (2/18) ಅವರ ಸ್ಪಿನ್ ದಾಳಿಗೆ ತತ್ತರಿಸಿತು. ಫಿಲ್ ಸಾಲ್ಟ್ 17 ಎಸೆತಗಳಲ್ಲಿ 37 (ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್) ಮತ್ತು ಟಿಮ್ ಡೇವಿಡ್ ಅವರ 20 ಎಸೆತಗಳಲ್ಲಿ ಅಜೇಯ 37 (ಎರಡು ಬೌಂಡರಿ ಮತ್ತು ನಾಲ್ಕು ಸಿಕ್ಸರ್) ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು.
ಆರ್‌ಸಿಬಿ ನೀಡಿದ 164 ರನ್ ಗುರಿ ಬೆನ್ನತ್ತಿದ ಡಿಸಿ ತಂಡ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಲ್ ಅವರ ಉತ್ತಮ ಜೊತೆಯಾಟದಿಂದ 13 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು.
ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಸಾಧಿಸುವ ಮೂಲಕ ಡಿಸಿ ಎರಡನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ.
Advertisement