
ಲಖನೌ: ಉತ್ತರ ಪ್ರದೇಶದ ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಲ್ 2025ರ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತವರಿನಲ್ಲಿಯೇ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಲಕ್ನೋ ಪರ ಏಡನ್ ಮಾಕ್ರಮ್ ಕೇವಲ 6 ರನ್ ಗಳಿಸಿ, ತ್ರಿಪಾಠಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮಿಚ್ಚೆಲ್ ಮಾರ್ಷ್ 30 ರನ್ ಗಳಿಸಿದರೆ, ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೊರಾನ್ ಕೇವಲ 8 ರನ್ ಗಳಿಸಿ ಎಲ್ ಬಿಡಬ್ಲ್ಯೂಗೆ ಬಲಿಯಾದರು.
ನಾಯಕ ರಿಷಭ್ ಪಂತ್, 63, ಅಯುಷ್ ಬದೋನಿ 22, ಅಬ್ದುಲ್ ಸಮದ್ 20 ಹಾಗೂ ಶಾರ್ದೂಲ್ ಠಾಕೂರ್ 6 ರನ್ ಗಳಿಸಿದರು. ಹೀಗಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿದ ಲಕ್ನೋ ಸೂಪರ್ ಜೈಂಟ್ಸ್ , ಚೆನ್ನೈಗೆ 167 ರನ್ ಗಳ ಗೆಲುವಿನ ಗುರಿ ನೀಡಿತು. ಸಿಎಸ್ ಕೆ ಪರ ರವೀಂದ್ರ ಜಡೇಜಾ ಹಾಗೂ ಮತೀಶಾ ಪತಿರಾಣಾ ತಲಾ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಅಂಶುಲ್ ಕಾಂಬೋಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಲಕ್ನೋ ನೀಡಿದ 167 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ CSK ಪರ ಆರಂಭಿಕ ಆಟಗಾರ ಶೈಕ್ ರಶೀದ್ 27, ರಚಿನ್ ರವೀಂದ್ರ 37 ರನ್ ಗಳಿಸಿ ಔಟಾದರು. ಬಳಿಕ ಬಂದ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಗೆ ರವಿ ಬಿಷ್ಣೋಯಿ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ರವೀಂದ್ರ ಜಡೇಜ ಕೇವಲ 7 ರನ್ ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಈ ಸಂದರ್ಭದಲ್ಲಿ ಶಿವಂ ದುಬೆ ಅಜೇಯ 43, ಹಾಗೂ ಮಹೇಂದ್ರ ಸಿಂಗ್ ಅಜೇಯ 26 ರನ್ ಗಳ ನೆರವಿನಿಂದ ಚೆನ್ನೈ 19.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.
Advertisement