
ಸುಮಾರು ಮೂರು ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಕನ್ನಡಿಗ ಕರುಣ್ ನಾಯರ್ ಎಂಟ್ರಿ ನೀಡಿದ್ದು, ಈ ಆವೃತ್ತಿಯಲ್ಲಿ ಡೆಲ್ಲಿ ಪರ ಆಡಿದ ಮೊದಲ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 89 ರನ್ ಗಳಿಸಿ, ಡೆಲ್ಲಿ ತಂಡಕ್ಕೆ ಆಸರೆಯಾದರು. ಆದರೆ, ತಂಡದ ಗೆಲುವಿಗೆ ಇದು ನೆರವಾಗಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಕರುಣ್ ನಾಯರ್, ಮುಂಬೈ ಇಂಡಿಯನ್ಸ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಬೌಲರ್‌ಗಳ ನೀರಿಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚುತ್ತಿದ್ದಂತೆ, ಅವರ ಹಳೆಯ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕರುಣ್ ನಾಯರ್ ಅವರು ಈ ಪೋಸ್ಟ್ ಅನ್ನು 2022 ರಲ್ಲಿ ಮಾಡಿದ್ದರು. ಅದರಲ್ಲಿ, 'ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ನೀಡು' ಎಂದು ಬರೆದಿತ್ತು. ಆರ್‌ಸಿಬಿ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕ ಫಾಫ್ ಡು ಪ್ಲೆಸಿಸ್ ಅವರು ಗಾಯದಿಂದಾಗಿ ಹೊರಗುಳಿದಿದ್ದರು. ಅವರ ಬದಲಿಗೆ ಕರುಣ್ ನಾಯರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ಇಂಪ್ಯಾಕ್ಟ್ ಮಾಡಿ ಹೋಗಿದ್ದಾರೆ.
ಇದಕ್ಕೂ ಮುನ್ನ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್ ಅವರ ಆಕರ್ಷಕ್ ನಾಕ್ ನೆರವಿನಿಂದ ಆರ್‌ಸಿಬಿ ಗೆಲುವು ಕಂಡಿದೆ. ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಕರಣ್ ಶರ್ಮಾ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ದಿನದ ಎರಡನೇ ಪಂದ್ಯ ರೋಮಾಂಚಕವಾಗಿತ್ತು. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 12 ರನ್‌ಗಳ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
'ಗೆಲುವು ಯಾವಾಗಲೂ ವಿಶೇಷವಾಗಿರುತ್ತದೆ. ವಿಶೇಷವಾಗಿ ಇಂತಹ ಪಂದ್ಯಗಳಲ್ಲಿ. ನೀವು ಹೋರಾಡುತ್ತಲೇ ಇರಬೇಕು ಮತ್ತು ಅದು ಬಹಳಷ್ಟು ಅರ್ಥಪೂರ್ಣವಾಗಿದೆ' ಎಂದು ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.
ಈ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದೀಗ ಐದನೇ ಪಂದ್ಯದಲ್ಲಿ ಸೋಲು ಕಂಡಿದೆ. ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ತಂಡ ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಕಂಡಿದೆ.
ಕೊನೆಯ 12 ಎಸೆತಗಳಲ್ಲಿ 23 ರನ್‌ಗಳ ಅಗತ್ಯವಿದ್ದಾಗ, ಡೆಲ್ಲಿ ಪರ ಅಶುತೋಷ್ ಶರ್ಮಾ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಎರಡು ಬೌಂಡರಿ ಬಾರಿಸಿ ಭರವಸೆ ಮೂಡಿಸಿದರು. ಆದರೆ, 19ನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಮೂರು ರನ್ ಔಟ್ ಆಗಿದ್ದರಿಂದ ಪಂದ್ಯ ಮುಂಬೈ ಪರ ತಿರುಗಿತು.
Advertisement