
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಮುಂಬೈ ಇಂಡಿಯನ್ಸ್ (MI) 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಎರಡನೇ ಬಾರಿ ಗೆಲುವು ಸಾಧಿಸಿದ್ದರೆ, ಸತತ 4 ಪಂದ್ಯಗಳನ್ನು ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡಿದೆ. ಮೂರು ವರ್ಷಗಳ ನಂತರ ಐಪಿಎಲ್‌ಗೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಡೆಲ್ಲಿ ಪರ 40 ಎಸೆತಗಳಲ್ಲಿ 89 ರನ್ ಗಳಿಸುವ ಮೂಲ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಮುಂಬೈ ಇಂಡಿಯನ್ಸ್ ವೇಗಿಗಳ ನೀರಿಳಿಸುವಂತೆ ಬ್ಯಾಟಿಂಗ್ ಮಾಡಿದರು.
ಡೆಲ್ಲಿ ತಂಡದ ಉಪ ನಾಯಕ ಫಾಫ್ ಡು ಪ್ಲೆಸಿಸ್ ಗಾಯಗೊಂಡ ನಂತರ ತಂಡದಲ್ಲಿ ಸ್ಥಾನ ಪಡೆದ ಕರುಣ್ ನಾಯರ್ ಅವರು ಉತ್ತಮ ಪ್ರದರ್ಶನ ನೀಡಿದರೂ, ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಆದ ಮೂರು ರನೌಟ್‌ಗಳಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಕಂಡಿತು. ಬ್ಯಾಟಿಂಗ್ ವೇಳೆ ಡಬಲ್ ತೆಗೆದುಕೊಳ್ಳಲು ಓಡುವಾಗ ಬುಮ್ರಾ ಅವರಿಗೆ ಕರುಣ್ ನಾಯರ್ ಡಿಕ್ಕಿ ಹೊಡೆಯುತ್ತಾರೆ. ಬಳಿಕ ಕ್ಷಮೆ ಕೇಳಿ ರನ್ ಓಟ ಮುಂದುವರಿಸುತ್ತಾರೆ. ಅದು ಮುಗಿದ ಬಳಿಕವೂ ಮತ್ತೊಮ್ಮೆ ಕ್ಷಮೆ ಕೇಳುತ್ತಾರೆ. ಆದರೆ, ಕರುಣ್ ಅವರ ಅನಿರೀಕ್ಷಿತ ಡಿಕ್ಕಿಯಿಂದಾಗಿ ಕೋಪಗೊಳ್ಳುವ ಬುಮ್ರಾ, ಕರುಣ್ ಬೇಕಂತಲೇ ಡಿಕ್ಕಿ ಹೊಡೆದಿದ್ದಾರೆ ಎಂದು ಭಾವಿಸುತ್ತಾರೆ.
ಘಟನೆಗೆ ಡಿಸಿ ಬ್ಯಾಟರ್ ಕ್ಷಮೆಯಾಚಿಸಿದರೂ, ಬುಮ್ರಾ ಅವರು ಒಪ್ಪುವುದಿಲ್ಲ. ನಂತರ ಕರುಣ್ ಎಂಐ ನಾಯಕ ಹಾರ್ದಿಕ್ ಪಾಂಡ್ಯ ಅವರ ಬಳಿಗೆ ಹೋಗಿ ಏನಾಯಿತು ಎಂಬುದನ್ನು ವಿವರಿಸುತ್ತಾರೆ. ಈ ವೇಳೆ, ರೋಹಿತ್ ಶರ್ಮಾ ನೀಡಿದ ಪ್ರತಿಕ್ರಿಯೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಅಭಿಮಾನಿಗಳು ಈ ಘಟನೆಗೆ ಬುಮ್ರಾ ಅವರ ಪ್ರತಿಕ್ರಿಯೆ ಅತಿರೇಕದ್ದಾಗಿದೆ ಎಂದಿದ್ದಾರೆ. ಈ ಘಟನೆಗೂ ಮುನ್ನ ಬುಮ್ರಾ ಅವರ ಎಸೆತದಲ್ಲಿ ಕರುಣ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದಲೇ ಬುಮ್ರಾ ಅಸಮಾಧಾನಗೊಂಡಿದ್ದಾರೆ ಎಂದು ಸಹ ಹಲವರು ಭಾವಿಸಿದ್ದಾರೆ.
ಮೂರು ವರ್ಷಗಳ ನಂತರ ಐಪಿಎಲ್‌ಗೆ ಮರಳಿರುವ ಕರುಣ್ ನಾಯರ್, ಡೆಲ್ಲಿ ಪರವಾಗಿ ಈ ಆವೃತ್ತಿಯಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಆಯ್ಕೆದಾರರಿಗೆ ತಾನು ಏನು ಮಾಡಬಹುದು ಎಂಬುದರ ಕುರಿತು ಸ್ಪಷ್ಟ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಎರಡರಲ್ಲೂ ಅದ್ಭುತ ಪ್ರದರ್ಶನದ ನಂತರ, ಕರುಣ್ ಅವರು ತಮ್ಮ ಟಿ20 ಬ್ಯಾಟಿಂಗ್ ಕೌಶಲ್ಯವನ್ನು ಹೇಗೆ ವಿಕಸನಗೊಳಿಸಿಕೊಂಡಿದ್ದಾರೆ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ.
Advertisement