IPL 2025: CSK ಗೆಲುವಿನ ನಂತರ LSG ಮಾಲೀಕ ಸಂಜೀವ್ ಗೋಯೆಂಕಾ ಜೊತೆ ಎಂಎಸ್ ಧೋನಿ ಮಾತುಕತೆ

ಗೋಯೆಂಕಾ, ಈಗ ಸ್ಥಗಿತಗೊಂಡಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ಐಪಿಎಲ್ ಫ್ರಾಂಚೈಸಿಯ ಮಾಲೀಕರಾಗಿದ್ದರು. ಆ ತಂಡದಲ್ಲಿ ಧೋನಿ ಎರಡು ವರ್ಷ ಆಡಿದ್ದರು.
ಸಂಜೀವ್ ಗೋಯೆಂಕಾ ಜೊತೆ ಎಂಎಸ್ ಧೋನಿ ಮಾತುಕತೆ
ಸಂಜೀವ್ ಗೋಯೆಂಕಾ ಜೊತೆ ಎಂಎಸ್ ಧೋನಿ ಮಾತುಕತೆ
Updated on

ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ವಿಕೆಟ್‌ಗಳ ಜಯ ಸಾಧಿಸಿದೆ. ನಾಯಕ ಎಂಎಸ್ ಧೋನಿ ಅವರ ಬ್ಯಾಟಿಂಗ್ ವೈಖರಿಯಿಂದ ತಂಡದ ಗೆಲುವಿನ ಹಾದಿ ಸುಗಮವಾಯಿತು. ಚೆನ್ನೈ ಈವರೆಗೆ 7 ಪಂದ್ಯಗಳನ್ನು ಆಡಿದ್ದು, ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ಈ ಗೆಲುವಿನ ಮೂಲಕ ಎರಡನೇ ಗೆಲುವು ದಾಖಲಿಸಿದೆ. ಧೋನಿ 11 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನೊಂದಿಗೆ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಶಿವಂ ದುಬೆ ಔಟಾಗದೆ 37 ಎಸೆತಗಳಲ್ಲಿ 43 ರನ್ ಗಳಿಸಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಸಿಎಸ್‌ಕೆ ಜಯಗಳಿಸಿತು.

ಪಂದ್ಯದ ನಂತರ, ಧೋನಿ LSG ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದದ್ದು ಕಂಡುಬಂತು. ಗೋಯೆಂಕಾ, ಈಗ ಸ್ಥಗಿತಗೊಂಡಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ಐಪಿಎಲ್ ಫ್ರಾಂಚೈಸಿಯ ಮಾಲೀಕರಾಗಿದ್ದರು. ಆ ತಂಡದಲ್ಲಿ ಧೋನಿ ಎರಡು ವರ್ಷ ಆಡಿದ್ದರು.

ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದರು. ನಾಯಕ ರಿಷಬ್ ಪಂತ್ 49 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಿಕೋಲಸ್ ಪೂರನ್ ಅವರು ಔಟ್ ಆದ ಬಳಿಕ ಎಲ್ಎಸ್‌ಜಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಪಂತ್ ಅವರ ಸಮಯೋಚಿತ ಆಟದಿಂದಾಗಿ 166 ರನ್ ಗಳಿಸುವಲ್ಲಿ ಶಕ್ತವಾಯಿತು.

ಇತ್ತ ಸಿಎಸ್‌ಕೆ ಪರ ಖಲೀಲ್ ಅಹ್ಮದ್ ಮತ್ತು ಅನ್ಶುಲ್ ಕಾಂಬೋಜ್ ತಲಾ 1 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಮತೀಷ ಪತಿರಾಣ ಎರಡು ವಿಕೆಟ್ ಪಡೆದು ಮಿಂಚಿದರು.

ಲಕ್ನೋ ತಂಡ ನೀಡಿದ 167 ರನ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶೇಖ್ ರಶೀದ್ ಮತ್ತು ರಚಿನ್ ರವೀಂದ್ರ ಅವರ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು. ಅವರು ಔಟಾದ ಬಳಿಕ ಸಿಎಸ್‌ಕೆ ಮಧ್ಯಮ ಕ್ರಮಾಂಕವು ಎಲ್‌ಎಸ್‌ಜಿಯ ಬೌಲಿಂಗ್ ದಾಳಿಗೆ ತತ್ತರಿಸಿತು. ನಂತರ ಕ್ರೀಸ್‌ಗೆ ಬಂದ ಧೋನಿ 16ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸತತ ಬೌಂಡರಿ ಗಳಿಸಿದರು. 17ನೇ ಓವರ್‌ನ ಕೊನೆಯ ಎಸೆತದಲ್ಲಿ, ಸಿಕ್ಸ್ ಬಾರಿಸಿದರು. ಈ ಮೂಲಕ ರನ್ ಅಂತರ ಕಡಿಮೆ ಮಾಡಿದರು.

12 ಎಸೆತಗಳಲ್ಲಿ 24 ರನ್ ಅಗತ್ಯವಿದ್ದಾಗ, ಶಿವಂ ದುಬೆ ಕೊನೆಯ ಓವರ್‌ನಲ್ಲಿ ನಿರಂತರ ದಾಳಿ ನಡೆಸಿದರು. ಅಂತಿಮವಾಗಿ ಸಿಎಸ್‌ಕೆ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸುವ ಮೂಲಕ ಎಲ್ಎಸ್‌ಜಿ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com