
ರಣವೀರ್ ಅಲ್ಹಾಬಾದಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿರುವ ವೇಗಿ ಭುವನೇಶ್ವರ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಆಟದ ಅಪ್ರೋಚ್, ಅವರ ಕಾರ್ಯತಂತ್ರದ ಮನಸ್ಥಿತಿ ಮತ್ತು ತಮ್ಮ ತಂಡವನ್ನು ಪರಿಣಾಮಕಾರಿಯಾಗಿ ಮಾರ್ಗದರ್ಶನ ಮಾಡುವ ಸಾಮರ್ಥ್ಯವನ್ನು ಭುವಿ ಮೆಚ್ಚಿಕೊಂಡಿದ್ದಾರೆ.
ಗಾಯದಿಂದ ಬಳಲುತ್ತಿರುವ ರುತುರಾಜ್ ಗಾಯಕ್ವಾಡ್ ಅವರ ಬದಲು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕರಾಗಿ ಎಂಎಸ್ ಧೋನಿ ಮತ್ತೆ ಜವಾಬ್ದಾರಿ ಹೊತ್ತುಕೊಂಡಿದ್ದು, ಕಳೆದ ಪಂದ್ಯದಲ್ಲಿ ತಂಡವನ್ನು ಗೆಲುವಿನ ಹಾದಿಗೆ ಮುನ್ನಡೆಸಿದ್ದಾರೆ. ಧೋನಿ ಅವರ ಅಸಾಧಾರಣ ವಿಕೆಟ್ ಕೀಪಿಂಗ್ ಕೌಶಲ್ಯ ಮತ್ತು ಆಟದ ಅರಿವನ್ನು ಭುವನೇಶ್ವರ್ ಕುಮಾರ್ ಶ್ಲಾಘಿಸಿದ್ದಾರೆ. ಪಂದ್ಯದ ಫಲಿತಾಂಶಗಳನ್ನು ರೂಪಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭುವಿ, ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯಾಗಿದ್ದು, ಎಂಎಸ್ ಧೋನಿ ಅವರಲ್ಲಿ ಮೆಸ್ಸಿಯ ಛಾಯೆಯನ್ನು ನೋಡುವುದಾಗಿ ತಿಳಿಸಿದ್ದಾರೆ.
'ನಾನು ಧೋನಿ ಜೊತೆ ಸಮಯ ಕಳೆದಿದ್ದೇನೆ ಮತ್ತು ಅವರೊಂದಿಗೆ ಸಮಯ ಕಳೆಯುವುದು ಯಾವಾಗಲೂ ಖುಷಿ ನೀಡುತ್ತದೆ. ಹಾಗಾಗಿ ಅವರ ಸ್ವಭಾವ ನನಗೆ ತಿಳಿದಿದೆ. ಅವರೊಂದಿಗೆ ಯಾರು ಸಮಯ ಕಳೆಯುತ್ತಾರೋ ಅವರೆಲ್ಲರಿಗೂ ಅವರು ಏನೆಂಬುದು ತಿಳಿದಿರುತ್ತದೆ. ನಾನು ಲಿಯೋನೆಲ್ ಮೆಸ್ಸಿಯನ್ನು ಟಿವಿಯಲ್ಲಿ ಅಥವಾ ನಾನು ನೋಡಿದ ಯಾವುದೇ ಆಟದಲ್ಲಿ ನೋಡಿದ್ದೇನೆ. ಹಾಗಾಗಿ ಅವರು ವಿಭಿನ್ನರು ಎಂದು ನಾನು ಭಾವಿಸುತ್ತೇನೆ. ಮೆಸ್ಸಿಯಂತೆಯೇ ಎಂಎಸ್ ಧೋನಿ ಕೂಡ ವಿಭಿನ್ನ' ಎಂದು ಭುವನೇಶ್ವರ ಕುಮಾರ್ ಹೇಳಿದ್ದಾರೆ.
'ವಿಕೆಟ್ ಕೀಪರ್ ಪಾತ್ರ ದೊಡ್ಡದು. ಒಬ್ಬ ಕೀಪರ್ ಕೀಪಿಂಗ್ ಮಾಡುವಾಗ, ಅವರಿಗೆ ಎಲ್ಲ ಕೋನಗಳು ತಿಳಿದಿರುತ್ತವೆ. ಧೋನಿ ಹಲವು ವರ್ಷಗಳ ಕಾಲ ನಾಯಕತ್ವ ವಹಿಸಿದ್ದಾರೆ ಮತ್ತು ಕೀಪಿಂಗ್ ಮಾಡಿದ್ದಾರೆ. ಹೀಗಾಗಿ, ಚೆಂಡು ಎಲ್ಲಿಗೆ ಹೋಗುವ ಸಾಧ್ಯತೆಗಳು ಇರುತ್ತದೆ ಎಂಬುದು ಅವರಿಗೆ ತಿಳಿಯುತ್ತದೆ. ಬೌಲರ್‌ನ ಲೈನ್ ಮತ್ತು ಲೆಂತ್ ಹೇಗಿದೆ ಎಂದು ಕೂಡ ಅವರಿಗೆ ತಿಳಿದಿರುತ್ತದೆ. ಹೀಗಾಗಿ, ನೀವು ಆ ರೀತಿಯಲ್ಲಿಯೇ ಬೌಲಿಂಗ್ ಅನ್ನು ಹೊಂದಿಸಿಕೊಳ್ಳಬಹುದು' ಎಂದಿದ್ದಾರೆ.
Advertisement