
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಮತ್ತು ಹಾಲಿ ಆಟಗಾರರು ಸಂತಾಪ ಸೂಚಿಸಿದ್ದಾರೆ. ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್, 'ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯನ್ನು ನೋಡಿ 'ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ. ನಾವು ಭರವಸೆ ಮತ್ತು ಮಾನವೀಯತೆಯಲ್ಲಿ ಒಗ್ಗಟ್ಟಿನಿಂದ ನಿಲ್ಲೋಣ' ಎಂದು X ನಲ್ಲಿ ಬರೆದಿದ್ದಾರೆ.
ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದಾರೆ.
'ಪ್ರತಿ ಬಾರಿ ಅಮಾಯಕರು ಜೀವ ಕಳೆದುಕೊಂಡಾಗ, ಮಾನವೀಯತೆ ಕೂಡ ಕಳೆದುಹೋಗುತ್ತದೆ. ಇಂದು ಕಾಶ್ಮೀರದಲ್ಲಿ ಏನಾಯಿತು ಎಂದು ನೋಡುವುದು ಮತ್ತು ಕೇಳುವುದು ಹೃದಯವಿದ್ರಾವಕವಾಗಿದೆ. ನಾನು ಎರಡು ದಿನಗಳ ಹಿಂದೆ ಅಲ್ಲಿದ್ದೆ. ಈ ನೋವು ಸಹಿಸುವುದು ಅಸಾಧ್ಯ' ಎಂದು ಇರ್ಫಾನ್ ಪಠಾಣ್ ಬರೆದಿದ್ದಾರೆ.
'ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಖಂಡನೀಯ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರು ಚೇತರಿಸಿಕೊಳ್ಳಲಿ' ಎಂದು ವೀರೇಂದ್ರ ಸೆಹ್ವಾಗ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟೀಂ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ KL ರಾಹುಲ್ ಕೂಡ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ಹೃದಯ ಚೂರಾಗಿದೆ. ನನ್ನ ಆಲೋಚನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಶಾಂತಿ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಕೆಎಲ್ ರಾಹುಲ್ ಹೇಳಿದರು.
'ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಗ್ಗೆ ಕೇಳಿ ಹೃದಯ ವಿದ್ರಾವಕವಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಈ ರೀತಿಯ ಹಿಂಸಾಚಾರಕ್ಕೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ' ಎಂದು ಗಿಲ್ ಹೇಳಿದ್ದಾರೆ.
'ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಭಾರತ ದಾಳಿ ಮಾಡುತ್ತದೆ' ಎಂದು ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ X ನಲ್ಲಿ ಬರೆದಿದ್ದಾರೆ.
ದಾಳಿಯ ದುಷ್ಕರ್ಮಿಗಳನ್ನು ಬಂಧಿಸಲು ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೈಸ್ರಾನ್, ಪಹಲ್ಗಾಮ್, ಅನಂತ್‌ನಾಗ್‌ನ ಸಾಮಾನ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪ್ರವಾಸಿ ಸ್ಥಳಗಳು ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ತೀವ್ರ ನಿಗಾ ಇಡಲು ದೆಹಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಇದಕ್ಕೂ ಮೊದಲು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು. ಭದ್ರತಾ ಪರಿಶೀಲನಾ ಸಭೆಗಾಗಿ ಸಚಿವ ಶಾ ಮಂಗಳವಾರ ಸಂಜೆ ಶ್ರೀನಗರಕ್ಕೆ ಆಗಮಿಸಿದ್ದರು. ಈ ಭೀಕರ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದರು.
Advertisement