IPL 2025: 'ಅರ್ಹತೆ ಇದ್ರೂ ಪಂಜಾಬ್ ಕಿಂಗ್ಸ್ ಐಪಿಎಲ್ 2025 ಗೆಲ್ಲಲ್ಲ'; ಕೋಚ್ ರಿಕಿ ಪಾಂಟಿಂಗ್ ವಿರುದ್ಧ ಮನೋಜ್ ತಿವಾರಿ ಕಿಡಿ
ಐಪಿಎಲ್ 2025ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ ಅವರು ಭಾರತೀಯರಿಗಿಂತ ವಿದೇಶಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದು ಭಾರತೀಯ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಆರೋಪಿಸಿದ್ದಾರೆ. ಕೋಲ್ಕತ್ತಾದಲ್ಲಿ ಮಳೆಯಿಂದ ರದ್ದಾದ ಕೆಕೆಆರ್ ಮತ್ತು ಪಿಬಿಕೆಎಸ್ ನಡುವಿನ ಪಂದ್ಯದ ನಂತರ ಅವರ ಹೇಳಿಕೆಗಳು ಬಂದಿವೆ. ಪಂಜಾಬ್ ನೀಡಿದ್ದ ಗುರಿಯನ್ನು ಕೆಕೆಆರ್ ಬೆನ್ನತ್ತಿದ ವೇಳೆ ಒಂದು ಓವರ್ ನಂತರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡು ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಹಂಚಿಕೊಂಡಿವೆ.
ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ತಿವಾರಿ, ರಿಕಿ ಪಾಂಟಿಂಗ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳಾದ ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರಂತಹ ಆಟಗಾರರನ್ನು ಬದಿಗೆ ತಳ್ಳಿ ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮೊದಲಿಗೆ ಕಳುಹಿಸಿದರು. ಈ ರೀತಿಯ ವರ್ತನೆ ಮುಂದುವರಿದರೆ, ಪಿಬಿಕೆಎಸ್ ಐಪಿಎಲ್ 2025 ಟ್ರೋಫಿಯನ್ನು ಎತ್ತಿ ಹಿಡಿಯುವುದು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.
'ಈ ಆವೃತ್ತಿಯಲ್ಲಿ ಪಂಜಾಬ್ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ನನ್ನ ಒಳ ಮನಸ್ಸು ಹೇಳುತ್ತಿದೆ. ಏಕೆಂದರೆ, ಇಂದು ಅವರು ಬ್ಯಾಟಿಂಗ್ ಮಾಡುವಾಗ ನಾನು ನೋಡಿದ್ದು ಏನೆಂದರೆ, ಕೋಚ್ ರಿಕಿ ಪಾಂಟಿಂಗ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳಾದ ನೆಹಾಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರನ್ನು ಕಳುಹಿಸಲಿಲ್ಲ. ಬದಲಿಗೆ ಅವರು ವಿದೇಶಿ ಆಟಗಾರರನ್ನು ನಂಬಿದ್ದರು. ಈ ಮೂಲಕ ಭಾರತೀಯ ಆಟಗಾರರ ಮೇಲೆ ವಿಶ್ವಾಸದ ಕೊರತೆಯನ್ನು ಸ್ಪಷ್ಟವಾಗಿ ತೋರಿಸಿದರು. ಅವರು ಈ ರೀತಿ ಮುಂದುವರಿದರೆ, ಟಾಪ್ 2ನಲ್ಲಿ ಸ್ಥಾನ ಪಡೆಯುವ ಅರ್ಹತೆ ಇದ್ದರೂ, ಪ್ರಶಸ್ತಿ ಪಡೆಯುವಲ್ಲಿ ದೂರ ಉಳಿಯಲಿದೆ' ಎಂದು ತಿವಾರಿ ಬರೆದಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಈ ಆವೃತ್ತಿಯಲ್ಲಿ ಕಳಪೆ ಫಾರ್ಮ್ ಹೊಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಮತ್ತೆ ಅವಕಾಶ ನೀಡಿದರು. ತಂಡವು ನಿಗದಿತ 20 ಓವರ್‌ಗಳಲ್ಲಿ 201 ರನ್ ಗಳಿಸಿತು. ಚೇಸಿಂಗ್‌ನ ಮೊದಲ ಓವರ್‌ನ ನಂತರ, ಮಳೆ ಆಟಕ್ಕೆ ಅಡ್ಡಿಯಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ