IPL 2025: Vaibhav Suryavanshi, Yashasvi Jaiswal ಸ್ಫೋಟಕ ಬ್ಯಾಟಿಂಗ್; GT ವಿರುದ್ಧ RRಗೆ 8 ವಿಕೆಟ್ ಭರ್ಜರಿ ಜಯ
ಜೈಪುರ: ಐಪಿಎಲ್ ಟೂರ್ನಿಯಲ್ಲಿ ಇಂದು ಮಹತ್ವದ ಪಂದ್ಯ ಮುಕ್ತಾಯವಾಗಿದ್ದು, ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಗುರಿಯನ್ನು ರಾಜಸ್ತಾನ ರಾಯಲ್ಸ್ ತಂಡ ಕೇವಲ 15.5 ಓವರ್ ನಲ್ಲೇ 212 ರನ್ ಗಳಿಸಿ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.
ರಾಜಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗುಜರಾತ್ ವಿರುದ್ಧದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಜೈಸ್ವಾಲ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 70 ರನ್ ಸಿಡಿಸಿದರು.
ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.
ಆದರೆ ಶತಕದ ಬಳಿಕ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ವೈಭವ್ ಸೂರ್ಯವಂಶಿ ಬೆನ್ನಲ್ಲೇ ನಿತೀಶ್ ರಾಣಾ ಕೂಡ ಬಂದಷ್ಟೇ ವೇಗವಾಗಿ 4 ರನ್ ಸಿಡಿಸಿ ರಷೀದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ನಾಯಕ ರಿಯಾನ್ ಪರಾಗ್ 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಸಹಿತ ಅಜೇಯ 32 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು.
ಶತಕದ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ