
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರಿ ವಿವಾದವೊಂದು ಸ್ಪೋಟಗೊಂಡಿದ್ದು, ಫೀಲ್ಡ್ ಅಂಪೈರ್ ಕುಮಾರ ಧರ್ಮಸೇನಾ ಇಂಗ್ಲೆಂಡ್ ಪರವಾಗಿ ಸನ್ಹೆ ಮಾಡಿದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೌದು... ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ನ(IND vs ENG 5th Test) ಮೊದಲ ದಿನವೇ ವಿವಾದವೊಂದು ಹುಟ್ಟಿಕೊಂಡಿದ್ದು ಆನ್ ಫೀಲ್ಡ್ ಅಂಪೈರ್ ಧರ್ಮಸೇನಾ(Kumar Dharmasena) ಇಂಗ್ಲೆಂಡ್ ಆಟಗಾರರಿಗೆ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಫೀಲ್ಡ್ ಅಂಪೈರ್ ಕುಮಾರ ಧರ್ಮಸೇನಾ ನಿಯಮ ಉಲ್ಲಂಘಿಸಿ ಇಂಗ್ಲೆಂಡ್ ತಂಡಕ್ಕೆ ನೆರವಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅನೇಕ ಮಾಜಿ ಭಾರತೀಯ ಆಟಗಾರರು ಆಗ್ರಹಿಸಿದ್ದಾರೆ.
ಆಗಿದ್ದೇನು?
ಲಂಡನ್ ಕೆನ್ನಿಂಗ್ಟನ್ ಓವರ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವೇಗಿ ಜೋಶ್ ಟಂಗ್ ಎಸೆತದಲ್ಲಿ ಚೆಂಡು ಸಾಯಿ ಸುದರ್ಶನ್ ಕಾಲಿಗೆ ಬಡಿದಾಗ ಇಂಗ್ಲೆಂಡ್ ಆಟಗಾರರು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿರು. ಆದರೆ ಫೀಲ್ಡ್ ಅಂಪೈರ್ ಆಗಿದ್ದ ಧರ್ಮಸೇನಾ ಮನವಿಯನ್ನು ತಳ್ಳಿಹಾಕಿದರು.
ಈ ವೇಳೆ ಯಾರ್ಕರ್ ಎಸೆತವಾಗಿದ್ದ ಕಾರಣ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ಮೊರೆ ಹೋಗಲು ನಿರ್ಧರಿಸುವ ಬಗ್ಗೆ ಚರ್ಚಿಸುತ್ತಿರುವಾಗಲೇ ಧರ್ಮಸೇನಾ ಚೆಂಡು ಬ್ಯಾಟ್‌ಗೆ ಇನ್‌ಸೈಡ್ ಎಡ್ಜ್ ಆಗಿದೆ ಎಂಬಂತೆ ಕೈಯಲ್ಲಿ ಸನ್ನೆ ಮಾಡಿ ತೋರಿಸಿದರು. ಇದರಿಂದ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ಮೊರೆ ಹೋಗದೆ ತಮ್ಮ ಡಿಆರ್‌ಎಸ್ ವ್ಯರ್ಥಮಾಡಿಕೊಳ್ಳುದ್ದನ್ನು ತಪ್ಪಿಸಿಕೊಂಡರು.
ಆಕ್ರೋಶ
ಇನ್ನು ಅಂಪೈರ್‌ಗಳಿಗೆ ಈ ರೀತಿಯ ಸನ್ನೆ ಮಾಡಲು ಅವಕಾಶ ಇಲ್ಲದಿದ್ದರೂ ಕೂಡ ಕುಮಾರ ಧರ್ಮಸೇನಾ ಈ ರೀತಿ ಮಾಡಿದ್ದಕ್ಕೆ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಜತೆಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಾಜಿ ಕ್ರಿಕೆಟಿಗರು ಆಗ್ರಹಿಸುತ್ತಿದ್ದಾರೆ.
ಐಸಿಸಿ ನಿಯಮ ಏನು ಹೇಳುತ್ತೆ?
ಡಿಆರ್‌ಎಸ್ ನಿಯಮ ಜಾರಿಗೆ ಬರುಕ್ಕೂ ಮುನ್ನ ಬೌಲಿಂಗ್ ತಂಡದ ಆಟಗಾರರು ಎಲ್‌ಬಿಡಬ್ಲ್ಯು ಸೇರಿ ಇನ್ನಿತ್ತರ ಔಟ್ ಮನವಿ ಮಾಡಿದಾಗ ಅಂಪೈರ್ ಇದನ್ನು ತಿರಸ್ಕರಿಸಿದ ಬಳಿಕ ಔಟ್ ಏಕೆ ನೀಡಿಲ್ಲ ಎಂದು ತಿಳಿಸುವ ನಿಟ್ಟಿನಲ್ಲಿ ಸನ್ನೆಗಳ ಮೂಲಕ ಅಥವಾ ಬಾಯಿ ಮಾತಿನ ಮೂಲಕ ಇದನ್ನು ಹೇಳುತ್ತಿದ್ದರು. ಆದರೆ ಡಿಆರ್‌ಎಸ್ ನಿಯಮ ಜಾರಿಗೆ ಬಂದ ಬಳಿಕ ಅಂಪೈರ್ ಯಾವುದೇ ರೀತಿಯ ಸನ್ನೆ ಮಾಡುವಂತಿಲ್ಲ. ಏಕೆಂದರೆ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುವ ಅವಕಾಶ ಆಟಗಾರರಿಗೆ ಇರುತ್ತದೆ.
Advertisement