
ಲಂಡನ್‌ನ ದಿ ಓವಲ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ 3ನೇ ದಿನದಂದು ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಮ್ಮ 6ನೇ ಟೆಸ್ಟ್ ಶತಕವನ್ನು ಬಾರಿಸಿದರು. ಶನಿವಾರ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಿದ್ದ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಸಮ್ಮುಖದಲ್ಲಿ ಆರಂಭಿಕ ಆಟಗಾರ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ದಿನದಾಟದ ನಂತರ, ಜೈಸ್ವಾಲ್ ತಮ್ಮ ಇನಿಂಗ್ಸ್ ಸಮಯದಲ್ಲಿ ಹಿಟ್‌ಮ್ಯಾನ್‌ನಿಂದ ಸಂದೇಶವನ್ನು ಪಡೆದಿದ್ದಾಗಿ ಬಹಿರಂಗಪಡಿಸಿದರು.
3ನೇ ದಿನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೈಸ್ವಾಲ್, ರೋಹಿತ್ ಅವರಿಂದ ತಾನು ಸಂದೇಶ ಪಡೆದೆ. ಹಿಟ್‌ಮ್ಯಾನ್ ಇರುವ ಸ್ಟ್ಯಾಂಡ್ ಕಡೆಗೆ ನೋಡಿದಾಗ ತನ್ನ ಮಾಜಿ ಆರಂಭಿಕ ಆಟಗಾರನಿಂದ ಸಂದೇಶ ಸಿಕ್ಕಿತು. ಮೇಲ್ಮೈ ಕಷ್ಟಕರವಾಗಿದ್ದರೂ, ಬ್ಯಾಟಿಂಗ್ ಮಾಡುವುದನ್ನು ಆನಂದಿಸಿದೆ ಮತ್ತು ಯಾವ ಎಸೆತಗಳನ್ನು ಆಡಬೇಕೆಂದು ನಿಖರವಾಗಿ ತಿಳಿದಿತ್ತು ಎಂದು ಜೈಸ್ವಾಲ್ ಹೇಳಿದರು.
'ಖಂಡಿತ ನಾನು ರೋಹಿತ್ ಭಾಯಿ ಅವರನ್ನು ನೋಡಿ ನಮಸ್ಕಾರ ಹೇಳಿದೆ ಮತ್ತು ಅವರು ನನಗೆ 'ಖೇಲ್ತೆ ರೆಹ್ನಾ' (ಆಟ ಮುಂದುವರಿಸಿ) ಎಂಬ ಸಂದೇಶವನ್ನೂ ನೀಡಿದರು' ಎಂದು ಜೈಸ್ವಾಲ್ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಸ್ವಲ್ಪ ಮೊದಲು ರೋಹಿತ್ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದರು. ನಂತರ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದ್ದರು. ಬಳಿಕ ಶುಭಮನ್ ಗಿಲ್ ಅವರನ್ನು ತಂಡದ ನಾಯಕನನ್ನಾಗಿ ಮಾಡಲಾಯಿತು.
ತಮ್ಮ ಇನಿಂಗ್ಸ್‌ನ ಆರಂಭದಲ್ಲಿ ಎರಡು ಬಾರಿ ಜೈಸ್ವಾಲ್ ಅವರ ಕ್ಯಾಚ್ ಕೈಬಿಡಲಾಯಿತು. ಬಳಿಕ ಅವರು ಭರ್ಜರಿ ಸಿಕ್ಸ್‌ನೊಂದಿಗೆ ತಮ್ಮ ಅರ್ಧಶತಕವನ್ನು ಗಳಿಸಿದರು ಮತ್ತು ಇಂಗ್ಲೆಂಡ್ ವಿರುದ್ಧ ಒಂಬತ್ತು ಅರ್ಧಶತಕಗಳನ್ನು ಗಳಿಸಿದರು. ಈ ಮೂಲಕ ಕೇವಲ 23ನೇ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು. ಜೈಸ್ವಾಲ್ ತಮ್ಮ ಅವರ ಆರನೇ ಟೆಸ್ಟ್ ಶತಕ ಬಾರಿಸಿದರು. ಇಂಗ್ಲೆಂಡ್ ವಿರುದ್ಧ 10 ಟೆಸ್ಟ್‌ಗಳಲ್ಲಿ, ಅವರು 63 ಕ್ಕೂ ಹೆಚ್ಚು ಸರಾಸರಿಯಲ್ಲಿ 1,100 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ಪಂದ್ಯ 1: 101 ಮತ್ತು 4 (ಹೆಡಿಂಗ್ಲೆ)
ಪಂದ್ಯ 2: 87 ಮತ್ತು 28 (ಎಡ್ಜ್‌ಬಾಸ್ಟನ್)
ಪಂದ್ಯ 3: 13 ಮತ್ತು 0 (ಲಾರ್ಡ್ಸ್)
ಪಂದ್ಯ 4: 58 ಮತ್ತು 0 (ಓಲ್ಡ್ ಟ್ರಾಫರ್ಡ್)
ಪಂದ್ಯ 5: 2 ಮತ್ತು 100* (ಓವಲ್)
Advertisement