
2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ರವಿಚಂದ್ರನ್ ಅಶ್ವಿನ್ ಮರಳಿದಾಗ ಆ ಆವೃತ್ತಿಯಲ್ಲಿ ಅವರಿಂದ ಉತ್ತಮ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಫ್ರಾಂಚೈಸಿಯನ್ನು ತೊರೆದ ಎಂಟು ವರ್ಷಗಳ ನಂತರ, ಆಫ್-ಸ್ಪಿನ್ನರ್ ಮರಳಿದಾಗ ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಆಶ್ ಅಣ್ಣಾ ಮತ್ತೆ ಬಂದರು ಎಂದು ಹೇಳಿಕೊಂಡರು.
ಅಶ್ವಿನ್ ಐಪಿಎಲ್ 2025 ರಲ್ಲಿ ಕೇವಲ ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ಇದು 2009 ರಲ್ಲಿ ಅವರ ಚೊಚ್ಚಲ ಆವೃತ್ತಿಯ ನಂತರದ ಅವರ ಅತ್ಯಂತ ಕಡಿಮೆ ಪಂದ್ಯಗಳಾಗಿವೆ. ದುಬಾರಿ ಮೊತ್ತಕ್ಕೆ ಬಿಕರಿಯಾದ ಅವರ ಪ್ರದರ್ಶನ ಮಾತ್ರ ಕುಂಠಿತವಾಗಿತ್ತು. ತಮ್ಮ ಯೂಟ್ಯೂಬ್ ಕಾರ್ಯಕ್ರಮ ಆಶ್ ಕಿ ಬಾತ್‌ನಲ್ಲಿ ಮಾತನಾಡಿದ ಅಶ್ವಿನ್, ಐಪಿಎಲ್ 2026ಕ್ಕಿಂತ ಮೊದಲು ಫ್ರಾಂಚೈಸಿಯಿಂದ ಪಾರದರ್ಶಕತೆಯನ್ನು ಬಯಸುವುದಾಗಿ ಸ್ಪಷ್ಟಪಡಿಸಿದರು.
'ಪ್ರತಿ ಸೀಸನ್ ಮುಗಿದ ನಂತರ, ಆಟಗಾರನನ್ನು ಉಳಿಸಿಕೊಳ್ಳಲು ಬಯಸುತ್ತಾರೋ, ಇಲ್ಲವೋ ಎಂಬುದನ್ನು ತಿಳಿಸುವುದು ಫ್ರಾಂಚೈಸಿಯ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಆಟಗಾರನೂ ಸ್ಪಷ್ಟತೆಯನ್ನು ಬಯಸುತ್ತಾನೆ. ನನ್ನ ಕೈಯಲ್ಲಿ ಏನೂ ಇಲ್ಲ; ನಾನು (ಸಿಎಸ್‌ಕೆಯಿಂದ) ಸ್ಪಷ್ಟತೆಯನ್ನು ಬಯಸುತ್ತಿದ್ದೇನೆ' ಎಂದು ಅವರು ಹೇಳಿದರು.
ಇತ್ತೀಚೆಗೆ ಸಂಜು ಸ್ಯಾಮ್ಸನ್ ಜೊತೆ ಮಾತನಾಡುವಾಗ 38 ವರ್ಷದ ಅಶ್ವಿನ್ ಸಂಭಾವ್ಯ ಟ್ರೇಡಿಂಗ್ ಬಗ್ಗೆ ತಮಾಷೆ ಮಾಡಿದ್ದರು. 2024ರ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಅಶ್ವಿನ್ ಅವರನ್ನು 9.75 ಕೋಟಿ ರೂ. ನೀಡಿ ಖರೀದಿಸಿತ್ತು. ಅವರನ್ನು ಬಿಡುಗಡೆ ಮಾಡುವುದರಿಂದ ಅಥವಾ ಟ್ರೇಡಿಂಗ್ ಮಾಡಿದರೆ 2026ರ ಹರಾಜಿಗೆ ಮುನ್ನ ಭಾರಿ ಹಣವನ್ನು ಉಳಿಸಿಕೊಳ್ಳಬಹುದು. ಆದಾಗ್ಯೂ, ಚೆನ್ನೈನಲ್ಲಿರುವ ಸಿಎಸ್‌ಕೆ ಅಕಾಡೆಮಿಯಲ್ಲಿ ಕಾರ್ಯಾಚರಣೆ ನಿರ್ದೇಶಕರ ಹುದ್ದೆಯಿಂದಲೂ ಅಶ್ವಿನ್ ಕೆಳಗಿಳಿಯಬೇಕಾಗುತ್ತದೆ.
ಸಿಎಸ್‌ಕೆ ತಂಡದ ಮಾಜಿ ಬ್ಯಾಟ್ಸ್‌ಮನ್ ಎಸ್. ಬದ್ರಿನಾಥ್, 'ಅಶ್ವಿನ್ ಸಿಎಸ್‌ಕೆಗೆ ಮೌಲ್ಯವನ್ನು ಸೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, 10 ಕೋಟಿ ರೂ. (9.75 ಕೋಟಿ ರೂ.) ಗಿಂತ ಅಲ್ಲ. ಐಪಿಎಲ್‌ನಲ್ಲಿ, ನೀವು ಆಟಗಾರನ ಬೆಲೆಯನ್ನು ನೋಡಬೇಕು. ಅವರು ಖಂಡಿತವಾಗಿಯೂ ಉತ್ತುಂಗದಲ್ಲಿಲ್ಲ. ಅದಕ್ಕಾಗಿಯೇ ಅಶ್ವಿನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ' ಎಂದು ಬದ್ರಿನಾಥ್ ತಮ್ಮ ಕ್ರಿಕ್ ಇಟ್ ವಿತ್ ಬದ್ರಿ ಚಾನೆಲ್‌ನಲ್ಲಿ ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಾಯಕ ಸಂಜು ಸ್ಯಾಮ್ಸನ್ ತಮ್ಮನ್ನು ಬದಲಾಯಿಸಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ ಎಂಬ ವರದಿಗಳು ಹರಿದಾಡಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
'ಎಂಎಸ್ ಧೋನಿ ಆಟ ಮುಂದುವರಿಸುತ್ತಾರೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ. ಆ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ. ಅವರು ಕೆಲವು ಪಂದ್ಯಗಳನ್ನು ಆಡಬಹುದು ಅಥವಾ ಅವರು ಚೆಪಾಕ್‌ನಲ್ಲಿ ಕೆಲವು ಪಂದ್ಯಗಳನ್ನು ಆಡಬಹುದು. ಬ್ರಾಂಡ್ ಮೌಲ್ಯ ಕಾರಣವಾಗಿರಬಹುದು. ಅವರು ಕೆಲವು ಬ್ರಾಂಡ್‌ಗಳನ್ನು ಆಕರ್ಷಿಸಬಹುದು. ಐಪಿಎಲ್ ಸೀಸನ್ ಪ್ರಾರಂಭವಾಗುವ ವರೆಗೆ ಅವರಿಗೆ ಸಮಯವಿದೆ. ಸಂಜು ಸ್ಯಾಮ್ಸನ್ ಅವರ ಉಪಸ್ಥಿತಿಯು ಗೊಂದಲವನ್ನು ಉಂಟುಮಾಡಬಹುದು ಎಂದು ನನಗನಿಸುತ್ತದೆ" ಎಂದು ಬದ್ರಿನಾಥ್ ಹೇಳಿದರು.
Advertisement